

ನವದೆಹಲಿ: ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರ ಮೇಲೆ ಹೇರಲಾಗಿರುವ ನಿರ್ಬಂಧದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಗುರುವಾರ ಪರಿಷ್ಕರಿಸಿದೆ. ಒಮಿಕ್ರಾನ್ ರೂಪಾಂತರಿ ಹಾವಳಿ ಆರಂಭವಾದಾಗ ವಿಧಿಸಲಾಗಿದ್ದ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ನಿಯಮವನ್ನು ಕೈಬಿಟ್ಟಿದ್ದು, ರಿಸ್ಕ್ ಇರುವ ದೇಶಗಳ ಪಟ್ಟಿಯನ್ನು ರದ್ದು ಗೊಳಿಸಿದೆ. ಆದರೆ, ವಿದೇಶಿ ಪ್ರಯಾಣಿಕರು 14 ದಿನ ಸ್ವಯಂ ನಿಗಾದಲ್ಲಿ ಇರಬೇಕು ಎಂದು ಸೂಚಿಸಿದೆ. ಫೆಬ್ರವರಿ 14ರಿಂದ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿದೇಶಗಳಿಂದ ಬಂದ ಪ್ರಯಾಣಿಕರು ಏರ್ ಸುವಿಧಾ ವೆಬ್ ಪೋರ್ಟಲ್ನಲ್ಲಿ ಸ್ವಯಂ-ಘೋಷಣೆ ಅರ್ಜಿಯನ್ನು ತುಂಬಬೇಕು. ಪ್ರಯಾಣಕ್ಕಿಂತ 72 ಗಂಟೆ ಮುಂಚಿತವಾಗಿ ಪಡೆದ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಅಥವಾ ಎರಡೂ ಡೋಸ್ ಲಸಿಕೆ ಪಡೆದ ಸರ್ಟಿಫಿಕೆಟ್ ಅಪ್ಲೋಡ್ ಮಾಡಬೇಕು ಎಂದು ಹೇಳಿದೆ.
ಶೇ. 4.44ಕ್ಕೆ ತಗ್ಗಿದ ಪಾಸಿಟಿವಿಟಿ ದರ: ಗುರುವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನ ಅವಧಿಯಲ್ಲಿ ಭಾರತದಲ್ಲಿ 67,084 ಹೊಸ ಕರೊನಾ ಪ್ರಕರಣಗಳು ವ್ಯಕ್ತವಾಗಿದೆ. ಇದೇ ವೇಳೆಯಲ್ಲಿ 1,242 ಮರಣಗಳು ಸಂಭವಿಸಿವೆ. ಇದರಿಂದ ಒಟ್ಟು ಮೃತರ ಸಂಖ್ಯೆ 5,06,520ಕ್ಕೆ ಮುಟ್ಟಿದೆ. 7,90,789 ಸಕ್ರಿಯ ಪ್ರಕರಣಗಳು ಇವೆ. 1,67,882 ಕೋವಿಡ್ ಪೀಡಿತರು ಗುಣಮುಖರಾಗಿದ್ದು, ಒಟ್ಟು ಸಂಖ್ಯೆ 4,11,80,751ಕ್ಕೆ ತಲುಪಿದೆ. ಒಟ್ಟಾರೆ ಚೇತರಿಕೆ ಪ್ರಮಾಣ ಶೇ. 96.95 ಇದೆ. ನಿತ್ಯದ ಪಾಸಿಟಿವಿಟಿ ದರ ಶೇ. 4.44 ಇದೆ. ದೇಶದಲ್ಲಿ ಒಟ್ಟಾರೆಯಾಗಿ ಕೋವಿಡ್ ಪರಿಸ್ಥಿತಿ ಆಶಾದಾಯಕವಾಗಿದೆ. ಒಮಿಕ್ರಾನ್ ಪ್ರಕರಣಗಳು ಶೇ. 80ರಷ್ಟು ಇಳಿಕೆ ಆಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ಹಾಗೂ ಪಾಸಿಟಿವಿಟಿ ದರ ಇಳಿಮುಖವಾಗುತ್ತಿದೆ. ಆದರೂ ಸುಮಾರು 40 ಜಿಲ್ಲೆಗಳಲ್ಲಿ ಸಾಪ್ತಾಹಿಕ ಪಾಸಿಟಿವಿಟಿ ದರ ಕಳವಳಕಾರಿ ಪ್ರಮಾಣದಲ್ಲಿರುವುದರಿಂದ ಹೆಚ್ಚು ನಿಗಾ ವಹಿಸುವುದು ಅಗತ್ಯ. ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಎಂಆರ್ಎನ್ಎ ಔಷಧದ ಪರೀಕ್ಷೆ ಅಂತಿಮ ಹಂತದಲ್ಲಿ ಇದೆ. | ವಿ.ಕೆ. ಪೌಲ್ ನೀತಿ ಆಯೋಗದ ಸದಸ್ಯ
4ನೇ ಡೋಸ್ ಸಂಭವ: ಅಮೆರಿಕದಲ್ಲಿ ಹಾವಳಿ ನಡೆಸುತ್ತಿರುವ ಕರೊನಾ ವೈರಸ್ನ ಒಮಿಕ್ರಾನ್ ರೂಪಾಂತರಿ ವಿರುದ್ಧ ಹೋರಾಡಲು ನಾಲ್ಕನೇ ಬೂಸ್ಟರ್ ಡೋಸ್ ನೀಡಬೇಕಾಗಬಹುದು ಎಂದು ಶ್ವೇತ ಭವನದ ಮುಖ್ಯ ವೈದ್ಯಕೀಯ ಅಧಿಕಾರಿ ಅಂತೋಣಿ ಫೌಸಿ ಅಭಿಪ್ರಾಯ ಪಟ್ಟಿದ್ದಾರೆ. ವಯಸ್ಸು ಮತ್ತು ವ್ಯಕ್ತಿಗತ ಆರೋಗ್ಯ ಪರಿಸ್ಥಿತಿ ಯನ್ನು ಆಧರಿಸಿ 4ನೇ ಬೂಸ್ಟರ್ ಡೋಸ್ ನೀಡಬಹುದಾಗಿದೆ ಎಂದು ಹೇಳಿದ್ದಾರೆ.
ವಿದೇಶಗಳಲ್ಲಿ ಕೋವಿಡ್ ಪೀಡಿತ ಭಾರತೀಯರ ಸಾವು: 88 ವಿವಿಧ ದೇಶಗಳಲ್ಲಿ ನೆಲೆಸಿದ್ದ 4,355 ಭಾರತೀಯರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೌದಿ ಅರೇಬಿಯಾದಲ್ಲಿ ಅತಿ ಹೆಚ್ಚು 1,237 ಭಾರತೀಯರ ಮರಣವಾಗಿದೆ ಎಂದು ವಿದೇಶಾಂಗ ಸಹಾಯಕ ಸಚಿವ ವಿ. ಮುರಳೀಧರನ್ ಗುರುವಾರ ರಾಜ್ಯಸಭೆಗೆ ತಿಳಿಸಿದರು. ಕತಾರ್ 113, ಮಲೇಷ್ಯಾ 186, ಯುಎಇ 894, ಕುವೇತ್ 668, ಒಮನ್ 555, ಬಹರೇನ್-203, ಅಮೆರಿಕ-05, ರಷ್ಯಾ-15 ಎಂದು ಮಾಹಿತಿ ನೀಡಿದರು.