

ಹೈದರಾಬಾದ್: ತೆಲಂಗಾಣದಲ್ಲಿ(Telangana) ಭದ್ರತಾ ಪಡೆಗಳು ಭರ್ಜರಿ ಯಶಸ್ಸು ಸಾಧಿಸಿವೆ. ಮುಲುಗು ಜಿಲ್ಲೆಯ ಚಲ್ಪಾಕ ಸಮೀಪದ ಅರಣ್ಯದಲ್ಲಿ ಭಾನುವಾರ (ಡಿಸೆಂಬರ್ 1) ಮುಂಜಾನೆ ಎನ್‌ಕೌಂಟರ್ ನಡೆದಿದೆ. ಚಲ್ಪಾಕ ಅರಣ್ಯ ಪ್ರದೇಶದಲ್ಲಿ ನಡೆದ ಈ ಗುಂಡಿನ ಚಕಮಕಿಯಲ್ಲಿ ಏಳು ಮಾವೋವಾದಿಗಳು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ತೆಲಂಗಾಣ ಗ್ರೇ ಹೌಂಡ್ಸ್ ಮತ್ತು ಮಾವೋವಾದಿ ನಿಗ್ರಹ ದಳ ಜಂಟಿ ಕಾರ್ಯಾಚರಣೆ ನಡೆಸಿದೆ. ಪೊಲೀಸರು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಏಳು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಪ್ರಮುಖ ಮಾವೋವಾದಿ ನಾಯಕ ಬದ್ರು ಕೂಡ ಇದ್ದಾರೆ ಎಂದು ವರದಿಯಾಗಿದೆ.
ಒಂದು ವಾರದ ಹಿಂದೆ ಇಬ್ಬರು ಆದಿವಾಸಿಗಳನ್ನು ಮಾವೋವಾದಿಗಳು ಮಾಹಿತಿದಾರರು ಎಂಬ ನೆಪದಲ್ಲಿ ಕೊಂದಿದ್ದರು. ವಾರ ಕಳೆಯುವ ಮುನ್ನವೇ 7 ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಲಾಗಿದೆ. ಆದಿವಾಸಿಗಳ ಹತ್ಯೆ ನಂತರ ಗ್ರೇಹೌಂಡ್ಸ್ ಪಡೆಗಳು ಅರಣ್ಯ ಪ್ರದೇಶದಲ್ಲಿ ಭಾರೀ ಕೂಂಬಿಂಗ್ ನಡೆಸಿದವು. ಇದೇ ವೇಳೆ ಮಾವೋವಾದಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ ನಂತರ ಗ್ರೇಹೌಂಡ್ಸ್ ಪ್ರತಿಯಾಗಿ ಗುಂಡು ಹಾರಿಸಿದರು.
ಸ್ಥಳದಿಂದ ಎರಡು ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಯಳಂದು-ನರಸಂಪೇಟೆ ಪ್ರದೇಶ ಸಮಿತಿಯ ಕಮಾಂಡರ್ ಬದ್ರು ಅಲಿಯಾಸ್ ಪಾಪಣ್ಣ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಇದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಈ ಎನ್‌ಕೌಂಟರ್ ಬಗ್ಗೆ ಪೊಲೀಸ್ ಆಡಳಿತವು ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಎನ್‌ಕೌಂಟರ್‌ನಲ್ಲಿ ಹತರಾದ ಇತರ ಆರು ಮಾವೋವಾದಿಗಳನ್ನು ಭದ್ರು ನೇತೃತ್ವದ ಏಗೊಲಾಪು ಮಲ್ಲಯ್ಯ(43), ಮುಸ್ಸಕಿ ದೇವಲ್(22), ಮುಸ್ಸಕಿ ಜಮುನಾ (23), ಜೈ ಸಿಂಗ್(25), ಕಿಶೋರ್(22), ಮತ್ತು ಕಾಮೇಶ್(23) ಎಂದು ಗುರುತಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಸೆಪ್ಟೆಂಬರ್ ತಿಂಗಳ ಹಿಂದೆ ತೆಲಂಗಾಣದ ಭದ್ರಾದ್ರಿಯ ಕೊಥಗುಡೆಮ್ ಪ್ರದೇಶದಲ್ಲಿ ತೆಲಂಗಾಣ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಎನ್‌ಕೌಂಟರ್ ನಡೆದಿತ್ತು. ಇದರಲ್ಲಿ ಆರು ಮಾವೋವಾದಿಗಳು ಸಾವನ್ನಪ್ಪಿದರು ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಹತ್ಯೆಗೀಡಾದ ಮಾವೋವಾದಿಗಳಲ್ಲಿ ಒಬ್ಬ ಮಹಿಳೆ ಕೂಡ ಇದ್ದಳು.(ಏಜೆನ್ಸೀಸ್)