

ಬೆಂಗಳೂರು: ನವೆಂಬರ್ 1ರಿಂದ ದೈನಂದಿನ ಹಣಕಾಸಿನ ಮೇಲೆ ನೇರವಾಗಿ ಪರಿಣಾಮ ಬೀರುವ ಹಲವು ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಆಧಾರ್ ನವೀಕರಣ ಶುಲ್ಕಗಳು, ಬ್ಯಾಂಕ್ ನಾಮನಿರ್ದೇಶನದ ನಿಯಮಗಳ ಬದಲಾವಣೆಯಿಂದ ಹೊಸ ಸರಕು ಮತ್ತು ಸೇವಾ ತೆರಿಗೆ ಹಂತಗಳ ಬದಲಾವಣೆ ಸೇರಿದಂತೆ ಯಾವೆಲ್ಲಾ ನಿಯಮಗಳು ಜಾರಿಗೆ ಬರುತ್ತಿವೆ. ಅವು ಜನರ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂಬ ಮಾಹಿತಿ ಇಲ್ಲಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮಕ್ಕಳಿಗಾಗಿ ಆಧಾರ್ ಕಾರ್ಡ್ಗಳ ಬಯೋಮೆಟ್ರಿಕ್ ನವೀಕರಣಕ್ಕೆ 125 ರೂ. ಶುಲ್ಕವಿತ್ತು. ಈಗ ಇದನ್ನು ಮನ್ನಾ ಮಾಡಲಾಗಿದ್ದು, ಇಂದಿನಿಂದ ಒಂದು ವರ್ಷ ಉಚಿತವಾಗಿ ನವೀಕರಣ ಮಾಡಲಾಗುತ್ತದೆ. ವಯಸ್ಕರಿಗೆ ಹೆಸರು, ಜನ್ಮದಿನಾಂಕ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನವೀಕರಿಸಲು 75 ರೂ. ಇರಲಿದ್ದು, ಬೆರಳಚ್ಚು ಅಥವಾ ಕಣ್ಣಿನ ಪಾಪೆ ಪೊರೆಯ ವಿವರ ನವೀಕರಣಕ್ಕೆ 125 ರೂ ಶುಲ್ಕ ವಿಧಿಸಲಾಗುವುದು.
ಇಂದಿನಿಂದ ಹೊಸ ಜಿಎಸ್ಟಿ ಹಂತಗಳು ಜಾರಿಗೆ ಬರಲಿವೆ. ಹಿಂದಿನ ಶೇ. 5, ಶೇ. 12, ಶೇ. 18 ಮತ್ತು ಶೇ. 28ರ ನಾಲ್ಕು ಹಂತಗಳ ಬದಲು ಶೇ. 15 ಮತ್ತು ಶೇ. 18 ಹಂತಗಳು ಜಾರಿಗೆ ಬರಲಿದೆ ಎಂದ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಇಂದಿನಿಂದ ಬ್ಯಾಂಕ್ಗಳು ಗ್ರಾಹಕರ ಖಾತೆ, ಲಾಕರ್ ಅಥವಾ ಸುರಕ್ಷಿತ ಕಸ್ಟಡಿ ವಸ್ತುವಿಗೆ ನಾಲ್ಕು ಜನರನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡುತ್ತದೆ. ಹೊಸ ನಿಯಮದಿಂದಾಗಿ ತುರ್ತು ಸಂದರ್ಭದಲ್ಲಿ ಕುಟುಂಬಗಳಿಗೆ ಹಣವನ್ನು ಸುಲಭಾಗಿ ಬಳಸಲು ಮತ್ತು ಮಾಲೀಕತ್ವದ ವಿವಾದಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ನಾಮನಿರ್ದೇಶನಗಳನ್ನು ಸೇರಿಸುವ ಅಥವಾ ಬದಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೀಘ್ರದಲ್ಲೇ ತನ್ನ ಲಾಕರ್ ಬಾಡಿಗೆ ಶುಲ್ಕ ಗಳನ್ನು ಪರಿಷ್ಕ ರಿಸಲಿದೆ. ಹೊಸ ದರಗಳು ಲಾಕರ್ ಗಾತ್ರ ಮತ್ತು ವರ್ಗವನ್ನು ಅವಲಂಬಿಸಿರುತ್ತವೆ. ನವೀಕರಿಸಿದ ಶುಲ್ಕಗಳನ್ನು ನವೆಂಬರ್ನಲ್ಲಿ ಘೋಷಿಸುವ ನಿರೀಕ್ಷೆ ಇದ್ದು, ಅಧಿಸೂಚನೆ ಹೊರಡಿಸಿದ 30 ದಿನಗಳ ಬಳಿಕ ಶುಲ್ಕ ಜಾರಿಗೆ ಬರಲಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ನಿಂದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಗೆ ಬದಲಿಸಲು ಬಯಸುವ ಸರ್ಕಾರಿ ನೌಕರರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನವೆಂಬರ್ 30 ರವರೆಗೆ ಸಮಯಾವಕಾಶವಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿವೃತ್ತ ನೌಕರರು ನವೆಂಬರ್ ಅಂತ್ಯದೊಳಗೆ ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಬ್ಯಾಂಕ್ ಶಾಖೆಯಲ್ಲಿ ಅಥವಾ ಜೀವನ್ ಪ್ರಮಾಣ್ ಜಾಲತಾಣದ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸಬಹುದು.
ಇಂದಿನಿಂದ ಎಸ್ಬಿಐ ಕಾರ್ಡ್ ಬಳಕೆದಾರರು ಮೊಬಿಕ್ವಿಕ್ ಮತ್ತು ಸಿಆರ್ಇಡಿನಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್ಗಳ ಮೂಲಕ ಮಾಡುವ ಶಿಕ್ಷಣ ಸಂಬಂಧಿತ ಪಾವತಿಗಳಿಗೆ ಶೇ. 1ರಷ್ಟು ಶುಲ್ಕ ವಿಧಿಸಲಾಗುತ್ತದೆ. ಎಸ್ಬಿಐ ಕಾರ್ಡ್ ಬಳಸಿ ಡಿಜಿಟಲ್ ವ್ಯಾಲೆಟ್ಗೆ 1000 ರೂ.ಗಿಂತ ಹೆಚ್ಚಿನ ಹಣವನ್ನು ಲೋಡ್ ಮಾಡಿದರೆ ಶೇ. 1 ಶುಲ್ಕ ವಿಧಿಸಲಾಗುತ್ತದೆ.