

ಸೂರತ್: ಶನಿವಾರ ಸೂರತ್ನ ಸಚಿನ್ ಪಾಲಿ ಗ್ರಾಮದಲ್ಲಿ ಆರು ಅಂತಸ್ಥಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಪಡೆಗಳು ಅವಶೇಷಗಳ ಅಡಿಯಿಂದ ಏಳು ಮೃತದೇಹಗಳನ್ನು ಹೊರತೆಗೆದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ SDRFನ ಹಿರಿಯ ಅಧಿಕಾರಿಯೊಬ್ಬರು, ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುತ್ತೇವೆ.
ನಮಗೆ ತಿಳಿದು ಬಂದಿರುವ ಮಾಹಿತಿ ಈ ಕಟ್ಟಡವನ್ನು 2016-17ರಲ್ಲಿ ನಿರ್ಮಿಸಲಾಗಿದ್ದು, ಕಟ್ಟಡ ಕುಸಿಯಲು ಏನು ಕಾರಣ ಎಂಬುದನ್ನು ತಿಳಿಯಲು ತನಿಖೆಗೆ ಆದೇಶಿಲಾಗಿದೆ. ಈ ಪ್ರದೇಶದಲ್ಲಿ ಫ್ಯಾಕ್ಟರಿ ನೌಕರರು ಹೆಚ್ಚಾಗಿ ವಾಸಿಸುತ್ತಿದ್ದು, ಉಳಿದ ಕಟ್ಟಡಗಳ ಗುಣಮಟ್ಟದ ಬಗ್ಗೆಯೂ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು SDRFನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.