

ಅಗರ್ತಲ: ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 7 ಮಂದಿ ವಿದ್ಯುತ್ ಶಾಕ್ನಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತ್ರಿಪುರಾದ ಉನಾಕೋಟಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ರಥಯಾತ್ರೆ ಸಮಯದಲ್ಲಿ ಹೈವೋಲ್ಟೇಜ್ ವಿದ್ಯುತ್ ತಂತಿಗೆ ರಥದ ತುದಿ ಸ್ಪರ್ಶಿಸಿ ಈ ದುರಂತ ಸಂಭವಿಸಿದೆ.
ಪೊಲೀಸರ ಪ್ರಕಾರ ಈ ಘಟನೆ "ಉಲ್ತೋ ರಥ" ಹೆಸರಿನ ಮೆರವಣಿಗೆ ಸಂದರ್ಭದಲ್ಲಿ ನಡೆದಿದೆ. ವಾರ್ಷಿಕ ರಥ ಯಾತ್ರೆಯ ಉತ್ಸವದ ನಂತರ ಹಿಂದು ದೇವರು ಜಗನ್ನಾಥ ಮತ್ತು ಅವನ ಇಬ್ಬರು ಒಡಹುಟ್ಟಿದವರ ಜತೆ ಹಿಂದಿರುಗುವ ಪ್ರಯಾಣದ ಸಂಕೇತವಾಗಿ ಉಲ್ತೋ ರಥಯಾತ್ರೆ ನಡೆಸಲಾಗುತ್ತದೆ. ಕಬ್ಬಿಣದಿಂದ ತಯಾರಿಸಲಾಗಿದ್ದ ರಥವನ್ನು ಅದ್ಧೂರಿಯಾಗಿ ಅಲಂಕಾರ ಮಾಡಲಾಗಿತ್ತು. ಹೈವೋಲ್ಟೇಜ್ ಸಂಪರ್ಕಕ್ಕೆ ರಥ ಬಂದಾಗ ವಿದ್ಯುತ್ ತಂತಿಗೆ ತಗುಲಿ, ಸ್ಥಳದಲ್ಲೇ 6 ಮಂದಿ ಮೃತಪಟ್ಟರೆ, ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ.
16ಕ್ಕೂ ಹೆಚ್ಚು ಮಂದಿ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಥವು ವಿದ್ಯುತ್ ಸಂಪರ್ಕಕ್ಕೆ ಹೇಗೆ ಬಂತು ಎಂಬುದನ್ನು ಕಂಡುಕೊಳ್ಳಲು ತನಿಖಾಧಿಕಾರಿಗಳು ಪ್ರಯತ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ ಮತ್ತು ಗಾಯಗೊಂಡಿರುವವರ ಚೇತರಿಕೆಗಾಗಿ ಚಿಕಿತ್ಸೆಗೆಂದು 50 ಸಾವಿರ ರೂ. ನೆರವು ಘೋಷಣೆ ಮಾಡಿದ್ದಾರೆ.
ದುರಂತದಲ್ಲಿ ಭಾಗಿಯಾಗಿರುವ ಗಾಯಾಳುಗಳನ್ನು ಭೇಟಿ ಮಾಡಲು ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ರೈಲಿನಲ್ಲಿ ಕುಮಾರ್‌ಘಾಟ್‌ಗೆ ತೆರಳಿದ್ದಾರೆ. (ಏಜೆನ್ಸೀಸ್)