36 ಗಂಟೆಯಲ್ಲೇ ಲಿಂಗನಮಕ್ಕಿಗೆ 7 ಅಡಿ ನೀರು !

jogfals
ವಿಶ್ವವಿಖ್ಯಾತ ಜೋಗ್‌ಫಾಲ್ಸ್‌ನಲ್ಲಿ ನೀರು ಹರಿಯುವ ಮನಮೋಹಕ ದೃಶ್ಯ.
Published on

ಶಿವಮೊಗ್ಗ: ಮಲೆನಾಡಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಭಾರೀ ಮಳೆ ಗಾಳಿಗೆ ಜಿಲ್ಲೆಯ ಹಲವೆಡೆ ಸಣ್ಣಪುಟ್ಟ ಅನಾಹುತಗಳು ಸಂಭವಿಸಿವೆ. ತೀರ್ಥಹಳ್ಳಿ, ಸಾಗರ ತಾಲೂಕಿನಲ್ಲಿ ಐದಾರು ಮನೆಗಳ ಮೇಲ್ಛಾವಣಿ, ಗೋಡೆ ಕುಸಿದಿದ್ದರೆ, ಆಗುಂಬೆ ಘಾಟಿಯಲ್ಲಿ ಓಮ್ನಿ ಮೇಲೆ ಮರ ಬಿದ್ದು ಭಾರೀ ಅನಾಹುತ ತಪ್ಪಿದೆ. ಇತ್ತ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಭರ್ಜರಿ ಏರಿಕೆ ಕಂಡಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ಕೇವಲ 36 ಗಂಟೆಯಲ್ಲೇ ಏಳು ಅಡಿಗೂ ಅಧಿಕ ನೀರು ಸಂಗ್ರಹವಾಗಿದೆ.

ಕಳೆದೆರಡು ವಾರಗಳಿಂದ ಕಣಾಮುಚ್ಚಾಲೆ ಆಟವಾಡುತ್ತಿದ್ದ ವರುಣ ಇದೀಗ ಆರ್ಭಟವನ್ನು ಹೆಚ್ಚಿಸಿದ್ದಾನೆ. ನದಿ, ಹಳ್ಳ-ಕೊಳ್ಳ, ಕೆರೆಕಟ್ಟೆಗಳು ಭರ್ತಿಯಾಗುತ್ತಿವೆ. ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ ದಾಖಲೆಯ 300 ಮಿ.ಮೀ. ಮಳೆ ಬಿದ್ದಿದೆ. ಇದು ಈ ಬಾರಿ ರಾಜ್ಯದಲ್ಲಿ ದಾಖಲೆಯಾಗಿದೆ. ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಮನೆಗಳಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ.
ಕಳೆದ 24 ಗಂಟೆಯಲ್ಲಿ ಸಾಗರದಲ್ಲಿ ಅತಿಹೆಚ್ಚು 111.20 ಮಿ.ಮೀ. ಮತ್ತು ಹೊಸನಗರ ತಾಲೂಕಿನಲ್ಲಿ 100.90 ಮಿ.ಮೀ. ಮಳೆಯಾಗಿದೆ. ಭದ್ರಾವತಿಯಲ್ಲಿ ಅತಿ ಕಡಿಮೆ 9.10 ಮಿ.ಮೀ. ಮಳೆಯಾಗಿದ್ದು ತೀರ್ಥಹಳ್ಳಿಯಲ್ಲಿ 100.80 ಮಿ.ಮೀ. ಮಳೆಯಾಗಿದೆ. ಸೊರಬದಲ್ಲಿ 34.60 ಮಿ.ಮೀ., ಶಿಕಾರಿಪುರದಲ್ಲಿ 18.80 ಮಿ.ಮೀ. ಮತ್ತು ಶಿವಮೊಗ್ಗದಲ್ಲಿ 15.30 ಮಿ.ಮೀ. ಮಳೆಯಾಗಿದೆ.
ತುಂಗಾ ಜಲಾಶಯ ಭರ್ತಿಯಾಗಿದ್ದು ಶೃಂಗೇರಿ, ಕೊಪ್ಪ ಭಾಗದಲ್ಲಿ ಅತ್ಯಧಿಕ ಮಳೆ ಆಗುತ್ತಿರುವ ಪರಿಣಾಮ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 21 ಕ್ರಸ್ಟ್ ಗೇಟ್‌ಗಳನ್ನು ತೆರೆದು 38,089 ಕ್ಯೂಸೆಕ್ ನೀರನ್ನು ಸಂಜೆ ವೇಳೆಗೆ ನದಿಗೆ ಹೊರಬಿಡಲಾಗುತ್ತಿದೆ. 186 ಅಡಿ ಸಾಮರ್ಥ್ಯದ ಜಲಾಶಯವು 127 ಅಡಿಗೆ ಏರಿಕೆ ಕಂಡಿದೆ. 4908 ಕ್ಯೂಸೆಕ್ ನೀರಿನ ಒಳಹರಿವಿದ್ದು 348 ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net