

ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಹಳ್ಳಿಯೊಂದರಲ್ಲಿ ಅಕ್ರಮ ಮದ್ಯ ಸೇವಿಸಿದ ಏಳು ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 15 ಜನ ತೀವ್ರ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಮಿಲಿಯಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಂಗಡಿಯೊಂದರಿಂದ ಖರೀದಿಸಿದ ನಕಲಿ ಮದ್ಯ ಸೇವಿಸಿದ ಜನರಲ್ಲಿ ಹಲವರು ಅಸ್ವಸ್ಥಗೊಂಡರು. ಕೂಡಲೇ ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಏಳು ಜನ ಪ್ರಾಣ ಕಳೆದುಕೊಂಡರು. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯದಂಗಡಿ ನಡೆಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಮದ್ಯದ ಸ್ಯಾಂಪಲ್ನ ಪರೀಕ್ಷೆ ನಂತರವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪ್ರಯಾಗ್ರಾಜ್ ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಅನುದಾನಿತ ಗೋಶಾಲೆಯಲ್ಲಿ 78 ಹಸುಗಳ ನಿಗೂಢ ಸಾವು!
ಕಳ್ಳಬಟ್ಟಿ ದುರಂತ ತಿಳಿಯುತ್ತಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ಮದ್ಯದಂಗಡಿ ಮಾಲೀಕರು ಅಕ್ರಮ ಮದ್ಯ ಮಾರುತ್ತಿರುವ ಬಗ್ಗೆ ಹಲವು ಬಾರಿ ದೂರಲಾಗಿದೆ. ಆದಾಗ್ಯೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ. ಈ ಪ್ರದೇಶದಲ್ಲಿ ಆ ದಂಪತಿ ಮೂರು ಅಂಗಡಿ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)