

ವಾರಣಾಸಿ: ಉದ್ಯಮಿಯೊಬ್ಬರಿಗೆ ಸಂಬಂಧಿಸಿದ 1.4 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಏಳು ಪೊಲೀಸರನ್ನು ವಜಾಗೊಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಭೇಲುಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಔರೈಯಾ ಜಿಲ್ಲೆಯಲ್ಲಿ ಗುಜರಾತ್ನ ಉದ್ಯಮಿಯನ್ನು ಅಪಹರಿಸಿ 1.4 ಕೋಟಿ ರೂ. ದರೋಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನೂ ಮುಂದುವರೆದಿದ್ದು, ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ.
ಆದರೆ ವಜಾಗೊಂಡ ಏಳು ಪೊಲೀಸರನ್ನು ಇನ್ನು ಬಂಧಿಸಿಲ್ಲ. ಸೇವೆಯಿಂದ ವಜಾಗೊಂಡ ಏಳು ಪೊಲೀಸರಲ್ಲಿ ಒಬ್ಬ ಸ್ಟೇಷನ್ ಹೌಸ್ ಆಫೀಸರ್ ಮತ್ತು ಮೂವರು ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೆಬಲ್ಗಳಾಗಿದ್ದಾರೆ.
ಈ ಕುರಿತು ಮಾತನಾಡಿದ ವಾರಣಾಸಿಯ ಪೊಲೀಸ್ ಹೆಚ್ಚುವರಿ ಪೊಲೀಸ್ ಕಮಿಷನರ್, ಆರಂಭದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಏಳು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು. ಆದರೆ ತನಿಖೆಯ ಸಮಯದಲ್ಲಿ ಅವರು ಅಪರಾಧ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಿರುವುದರಿಂದ ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿದೆ.
ದರೋಡೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಈ ಕುರಿತು ತನಿಖೆ ನಡೆಯುತ್ತಿದೆ. ಸಂಗ್ರಹಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.(ಏಜೆನ್ಸೀಸ್)