

ಬೆಂಗಳೂರು: ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನವು ಪ್ರಕಟಿಸಿದ ಏಳು ಕೃತಿಗಳ ಸಮಾರಂಭವು ಸಾಹಿತ್ಯ, ಅಧ್ಯಾತ್ಮ, ಶೈಕ್ಗಣಿಕ, ಪ್ರಾಕೃತಿಕ ಚಿಂತನೆಗಳ ಸಮಾಗಮವಾಗಿತ್ತು.
ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ‘ಅಮೀಬಾ’, ಶತಾವಧಾನಿ ಡಾ. ಆರ್. ಗಣೇಶ್ ರಚಿತ ‘ಮಾರ್ಗಣ’, ‘ಮಂತಣ’, ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಅವರ ‘ತಂದೆ-ಮಗಳು’, ‘ಅವರು, ಇವರು, ಎವರು...‘, ಪರಿಸರವಾದಿ ಶಿವಾನಂದ ಕಳವೆ ಅವರ ‘ಕೆರೆಯ ನೋಡಿರೋ’, ‘ಮೇಷ್ಟ್ರ ಗಿರಿ’, ಪುಸ್ತಕಗಳು ಪ್ರಕಟವಾದವು. ‘ಅಮೀಬಾ ಕೃತಿಯ ನೂರಕ್ಕೂ ಪ್ರತಿಗಳು ಮಾರಾಟವಾಗಿದ್ದು ಯಂಡಮೂರಿಯವರ ಸಾಹಿತ್ಯದ ಜನಪ್ರಿಯತೆಯನ್ನು ತೋರಿಸಿತು.
ಸಂಸ್ಕೃತಿ ಮರೆತರೆ ಅಪಾಯ ಕಾದಿದೆ ಎಂದರ್ಥ:
ಪುಸ್ತಕ ಸಂಸ್ಕೃತಿಗೆ ಸದಭಿರುಚಿಯ ಕುಟುಂಬ ಸಂಸ್ಕೃತಿ ಮುಖ್ಯವಾಗಿದೆ. ಅದೇ ರೀತಿ ದೇಸೀ ಆಹಾರ ಸಂಸ್ಕೃತಿಯನ್ನು ಬಿಟ್ಟು ಸ್ವಿಗ್ಗಿ, ಜೊಮ್ಯಾಟೋಗೆ ಹೋಗಿದ್ದೇ ಆದಲ್ಲಿ ದೊಡ್ಡ ಅಪಾಯ ಕಾದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ಆಧ್ಯಾತ್ಮಕ ಚಿಂತಕ ಡಾ. ಶತಾವಧಾನಿ ಆರ್. ಗಣೇಶ್ ಎಚ್ಚರಿಸಿದರು.
ನೆಲದ ಭಾಷೆಗಳನ್ನು ಉಳಿಸಿಕೊಂಡರೆ ನಮ್ಮ ಊಟ, ತಿಂಡಿ ಉಳಿಯಲಿದೆ. ಇಡ್ಲಿ, ದೋಸೆ, ರಾಗಿಮುದ್ದೆ, ಚಪಾತಿ ಬಿಟ್ಟು ಸ್ವಿಗ್ಗಿ, ಜೊಮ್ಯಾಟೋಗೆ ಹೋದ್ರೆ ದೊಡ್ಡ ಅಪಾಯ ಕಾದಿದೆ ಎಂದರ್ಥ.
ಒಂದಕ್ಕೆ ಮತ್ತೊಂದು ಪೂರಕವಾಗಿ ಕೂಡಿ ಬರಬೇಕು. ಒಳ್ಳೆಯ ಸಾಹಿತ್ಯ ಓದಿ, ಅದರ ಸಂವೇದನೆಯನ್ನು ಮನೆಯವರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಒಬ್ಬರು ಭಾರತದ ಭಾಷೆಯನ್ನು ಮಾತನಾಡುವವರು ಕಡಿಮೆ ಮಾಡಿಕೊಮಡರೆ, ಒಬ್ಬ ಸಾರ್ಥಕ ಪ್ರಜೆ ನಷ್ಟವಾದ ಎಂದರ್ಥ. ಭಾರತವನ್ನು ಮುಟ್ಟಲು ಭಾರತೆದ ಸಂಸ್ಕೃತಿಗಳೇ ಇದ್ದು, ಅವುಗಳನ್ನು ಮುಟ್ಟುವ ಪ್ರಯತ್ನ ಮಾಡಬೇಕಿದೆ ಎಂದರು.
ಬೈಗುಳಗಳೇ ಸಂಸ್ಕೃತಿಯ ಮೂಲ:
ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಕಾದಂಬರಿ ‘ಗೃಹಭಂಗ’ ಪಂಜಾಬಿಗೆ ಅನುವಾದ ಆದ ಸಮಯದಲ್ಲಿ ‘ಅಚ್ಚ ಕನ್ನಡ ಬೈಗುಳಗಳನ್ನು ಇಷ್ಟು ಚೆಂದವಾಗಿ ಪಂಜಾಬಿಗೆ ಅನುವಾದ ಮಾಡಲು ಹೇಗೆ ಸಾಧ್ಯವಾಯಿತು’ ಎಂದು ವ್ಯಕ್ತಿಯೊಬ್ಬರು ಕೇಳಿದ್ದರಂತೆ. ಅದಕ್ಕೆ ಪಂಜಾಬಿ ಅನುವಾದಕರು ಹೇಳಿದರಂತೆ ‘ಕನ್ನಡದಲ್ಲಿ ಬೈದಿರುವ ಅಷ್ಟೂ ಪದಗಳಿಗೆ ಪಂಜಾಬಿಯಲ್ಲಿ ಸಂವಾದಿ ಪದಗಳಿವೆ’ ಎಂದು ಹೇಳಿದ್ದರಂತೆ. ಅದಕ್ಕೆ ಹೇಳುವುದು ಬೈಗುಳಗಳೇ ಸಂಸ್ಕೃತಿ ಮೂಲ ಎಂದರು.
ಮಕ್ಕಳಿಗೆ ಪರಿಸರ ಜ್ಞಾನ ತಿಳಿಸಿ:
ಇಂದಿನ ಮಕ್ಕಳಿಗೆ ಗಿಡ, ಮರಗಳ ಹೆಸರು ಗೊತ್ತಿಲ್ಲ. ತಾವು ಕುಡಿಯುತ್ತಿರುವ ನೀರು ಎಲ್ಲಿಂದ ಬರಲಿದೆ. ಯಾವ ನದಿಯ ನೀರು ಎಂಬ ಜ್ಞಾನವಿಲ್ಲ. ರಾಜ್ಯದ ನದಿಯ ಹೆಸರು ಕೇಳಿದರೆ ನೈಲ್ ನದಿಯ ಹೆಸರು ಹೇಳುತ್ತಿರುವುದು ದುರಂತವಾಗಿದೆ ಎಂದು ಪರಿಸರವಾದಿ ಶಿವಾನಂದ ಕಳವೆ ಅಸಮಾಧಾನ ವ್ಯಕ್ತಪಡಿಸಿದರು.
ಶಾಲಾ ಮಕ್ಕಳಿಗೆ ಅಂಕಗಳನ್ನು ಇಡದೆ, ಜ್ಞಾನಕ್ಕಾಗಿ ಪರಿಸರ ಕುರಿತ ಪಾಠ ಮಾಡಬೇಕಿದೆ. ಈ ಮೂಲಕ ನಮ್ಮ ಸುತ್ತಲಿನ ಪರಿಸರದ ಬಗ್ಗೆ ಅರಿವು ಮುಡಿಸಬೇಕಿದೆ. ವಾತಾವರಣವನ್ನು ನೋಡಿ ಮಳೆಯ ಮುನ್ಸೂಚನೆಯನ್ನು ತಿಳಿಯುವ ಜ್ಞಾನವನ್ನು ನಮ್ಮ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಆದರೆ, ಇಂದಿನ ಜನರಿಗೆ ನೀರಿನ ಮೌಲ್ಯ ತಿಳಿಯುತ್ತಿಲ್ಲ. ನೀರನ್ನು ಸಂರಕ್ಷಿಸುವ, ಮಿತವಾಗಿ ಬಳಸುವ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಕೆರೆಗಳನ್ನು ನಿರ್ಮಿಸುವ ಬಹುದೊಡ್ಡ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ, ಅನುವಾದ ಗಣೇಶ ಭಟ್ಟ ಕೊಪ್ಪಲತೋಟ ಉಪಸ್ಥಿತರಿದ್ದರು.
ಕರ್ನಾಟಕಕ್ಕೆ ಶೀಘ್ರವೇ 9ನೇ ಜ್ಞಾನಪೀಠ: ಯಂಡಮೂರಿ ಭವಿಷ್ಯ
ಆಂಧ್ರ ಪ್ರದೇಶಕ್ಕೆ ಒಂದು, ತೆಲಂಗಾಣಕ್ಕೆ ಎರಡು ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕರ್ನಾಟಕಕ್ಕೆ ಸದ್ಯದಲ್ಲಿಯೇ ಒಂಭತ್ತನೇ ಜ್ಞಾನಪೀಠ ದೊರೆಯುವ ಎಲ್ಲ ಲಕ್ಷಣಗಳಿವೆ ಎಂದು ಹಿರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಭವಿಷ್ಯ ನುಡಿದರು.
ಸುಬ್ರಮಣ್ಯ ಅವರು ಎಸ್.ಎಲ್. ಭೈರಪ್ಪ ಅವರಿಂದ ಯಂಡಮೂರಿ ಅವರವರೆಗೆ ಎಲ್ಲ ರೀತಿಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಎಂದು ತಮ್ಮ ಕೃತಿಗಳ ಅನುಭವಗಳನ್ನು ಹಂಚಿಕೊಂಡರು.
ಆತ್ಮಾವಲೋಕನಕ್ಕಾಗಿ ಲೇಖನ: ವೀಣಾ
ಕಾದಂಬರಿ ನಮ್ಮ ತಂದೆಯವರಿಗೇ ಸಾಕು. ಆತ್ಮವನ್ನು ಅವಲೋಕನ ಮಾಡಿಕೊಳ್ಳಲು ಕೇವಲ ಲೇಖನ ಬರೆಯುತ್ತಿದ್ದೇನೆ ಎಂದು ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ತಿಳಿಸಿದರು. ರಾಜಕೀಯ, ಸಾಹಿತ್ಯ, ಆಧ್ಯಾತ್ಮ ಸೇರಿ ಯಾವುದೇ ಕ್ಷೇತ್ರದ ವಿಚಾರ ಬರೆದರೂ ‘ಅದನ್ನು ಹೀಗೆ ಬರೆಯಬೇಕಿತ್ತು. ಹಾಗೆ ಬರೆಯಬೇಕಿತ್ತು. ಎಂಬ ಟೀಕೆಗಳು ಬರುತ್ತವೆ. ಎಲ್ಲ ಕ್ಷೇತ್ರಗಳಿಗೂ ಇಂದು ವಾರಸುದಾರರಿದ್ದಾರೆ. ಪ್ರಕೃತಿಯೊಂದೇ ವಾರಸುದಾರರಿಲ್ಲದೆ ಕ್ಷೇತ್ರವಾಗಿದೆ ಎಂದರು.
ಹೈದರಾಬಾದಿನಿಂದ ಬೆಂಗಳೂರಿಗೆ ಹೊರಡುವ ವೇಳೆ ನನ್ನ ಹೆಂಡತಿ ಎಲ್ಲಿಗೆ ಹೊರಟ್ರಿ ಎಂದು ಕೇಳಿದ್ರೆ. ನನ್ನ ಜನ್ಮಭೂಮಿಗೆ ಹೊರಡುತ್ತಿದ್ದೇನೆಂದು ಉತ್ತರಿಸುತ್ತೇನೆ. ನನ್ನ ತಾಯಿ ಸರಸ್ವತಿ, ನನ್ನ ಅತ್ತೆ ರಶ್ಮಿ. ಕರ್ನಾಟಕ ಸರಸ್ವತಿ ನಿಲಯವಾದ್ದರಿಂದ ನನಗೆ ತವರು ಮನೆ. ಬಿಜಿನೆಸ್ ವಿಚಾರವಾಗಿ ಹೈದರಾಬಾದ್ ನನಗೆ ಅತ್ತೆ ಮನೆಯಾಗಿದೆ. - ಯಂಡಮೂರಿ ವೀರೇಂದ್ರನಾಥ್, ಕಾದಂಬರಿಕಾರ ಜೀವನವನ್ನು ಉತ್ತಮಪಡಿಸಿಕೊಳ್ಳಲು ಜ್ಞಾನವು ಬಹಳ ಮುಖ್ಯ. ನೂರಾರು ಒಳ್ಳೆಯ ಪುಸ್ತಕಗಳು ಮನಗಳನ್ನು ಪರಿವರ್ತಿಸುತ್ತವೆ. ವ್ಯಕ್ತಿತ್ವ ವಿಕಸನದಿಂದ ಜೀವನ ಬದಲಾಗುತ್ತದೆ. ನನ್ನ ಜೀವನ ಬದಲಾವಣೆಯಲ್ಲಿ ಯಂಡಮೂರಿ ಅವರ ಪಾತ್ರ ಅಗಾಧವಾದುದು. - ಕೆ. ಹರೀಶ್, ವಾಗ್ದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ