ಬೆಂಗಳೂರು: ಮೈಸೂರು ನಗರದ ಸಮಗ್ರ ಅಭಿವೃದ್ಧಿ ಸಂಬಂಧ ಆಗಬೇಕಾದ ಕೆಲಸಗಳ ಕುರಿತು ಪರಾಮರ್ಶೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸಗಳಿಗೆ ವೇಗ ನೀಡಲು, ಅರ್ಧಕ್ಕೆ ನಿಂತ ಕಾಮಗಾರಿಗಳಿಗೆ ಪುನಃ ಚಾಲನೆ ಕೊಡಲು, ಹೊಸ ಕೆಲಸಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳುವ ಸಂಬಂಧ ಸೂಚನೆ ನೀಡಿದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮೈಸೂರು ಅಭಿವೃದ್ಧಿ ಸಂಬಂಧ ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳ ಜತೆ ನಡೆದ ಸಭೆಯಲ್ಲಿ ಮೂಲಭೂತ ಸೌಕರ್ಯ ಸಂಬಂಧ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಮುಖ್ಯವಾಗಿ ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತವಾಗಿ ಆಗದೆ ಕುಂಟುತ್ತಿರುವ ಬಗ್ಗೆ ಕೇಂದ್ರದ ಮತ್ತು ರಾಜ್ಯದ ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಯವರು ಈ ಬಗ್ಗೆ ಕೇಂದ್ರದ ಸಚಿವರಿಗೆ ವಿವರವಾದ ಪತ್ರ ಬರೆಯಲು ಮತ್ತು ಅನುಷ್ಠಾನ ಕುರಿತು ಕೇಂದ್ರ ವಿಮಾನಯಾನ ಸಚಿವರನ್ನು ಜ.15 ರಂದು ಭೇಟಿಯಾಗಿ ಮಾತುಕತೆ ನಡೆಸಲು ತೀರ್ಮಾನಿಸಿದರು. ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಲಿದೆ. ಯೋಜನೆಯಡಿ ಇನ್ನೂ 46 ಎಕರೆ ಭೂಸ್ವಾಧೀನ ಆಗಬೇಕಿದೆ. ಈಗಾಗಲೇ 111 ಎಕರ‌್ರೆ ಭೂಸ್ವಾಧೀನಕ್ಕೆ ಪಾವತಿ ಮಾಡಲಾಗಿದೆ. ಇನ್ನೂ 95 ಎಕರೆ ಪಾವತಿ ಆಗಬೇಕಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಅದೇ ರೀತಿ ಶಿಥಿಲಗೊಂಡಿರುವ ಲಾನ್ಸ್‌ಡೌನ್ ಕಟ್ಟಡವನ್ನು ತೆರವುಗೊಳಿಸಿ ಅದೇ ಮಾದರಿಯಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಈ ಕುರಿತಾದ ಎಲ್ಲಾ ಕಾನೂನು ತೊಡಕುಗಳನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು. ಮೈಸೂರು ನಗರ ಹಾಗೂ ಹೊಸದಾಗಿ ನಿರ್ಮಿಸಲಾಗಿರುವ ಬಡಾವಣೆಗಳಲ್ಲಿ ಒಳಚರಂಡಿ ನಿರ್ಮಾಣ, ಕೊಳಚೆ ನೀರು ಸಂಸ್ಕರಣೆ ಯೋಜನೆ ಜಾರಿಗೆ 670 ಕೋಟಿ ರೂ. ಡಿಪಿಆರ್ ಸಿದ್ಧಪಡಿಸಲಾಗಿದ್ದು, ಅದನ್ನು ಸಂಪುಟದ ಮುಂದೆ ಮಂಡಿಸಲು ಸಿಎಂ ಅಧಿಕಾರಿಗಳಗೆ ನಿರ್ದೇಶನ ನೀಡಿದರು.