

ಲಾಹೋರ್: ವಯಸ್ಸು ಪ್ರೀತಿಗೆ ಅಡ್ಡಿಯೇ ಅಲ್ಲ. ವಯೋ ಅಂತರದ ಮದುವೆ ಮೂಲಕ ಕೆಲವರು ವಯಸ್ಸು ಪ್ರೀತಿಗೆ ಅಡ್ಡಿಯೇ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಹಿರಿಯ ವ್ಯಕ್ತಿಯೊಬ್ಬ ಯುವತಿಯನ್ನು ಮದುವೆಯಾದರೆ (ಯಾವುದೇ ದೇಶವಾಗಲಿ) ಈ ಸಮಾಜ ಅದನ್ನು ಸಾಮಾನ್ಯವಾಗಿಯೇ ನೋಡುತ್ತದೆ. ಆದರೆ, ಹಿರಿಯ ಮಹಿಳೆ ಯುವಕನನ್ನು ಮದುವೆಯಾದರೆ ಭಾರಿ ಸುದ್ದಿಯೇ ಆಗುತ್ತದೆ. ಅಂಥದ್ದೇ ಒಂದು ವಿನೂತನ ಮದುವೆ ಇದೀಗ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನ 23 ವರ್ಷದ ಯುವಕ 65 ವರ್ಷದ ಹಿರಿಯ ಮಹಿಳೆಯನ್ನು ಮದುವೆ ಆಗಿರುವುದು ಇದೀಗ ಭಾರಿ ಚರ್ಚೆಯ ವಿಷಯವಾಗಿದೆ. ಯುವಕನ ಹೆಸರು ಅಬ್ದುಲ್ಲಾ, ಪಾಕ್ನ ಗುಂಜರಾವಾಲದ ಚ್ಛಟಾ ಏರಿಯಾ ನಿವಾಸಿ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಜೆಕ್ ಗಣರಾಜ್ಯದ ಅರಿಯಾನ ಎಂಬ ಮಹಿಳೆಯನ್ನು ವರಿಸಿದ್ದಾನೆ.
ಎರಡು ವರ್ಷಗಳ ಹಿಂದೆ ಆರಂಭವಾದ ಪರಿಚಯ ಸ್ನೇಹಕ್ಕೆ ತಿರುಗಿ, ಬಳಿಕ ಪ್ರೇಮಾಂಕುರವಾಗಿ ಇದೀಗ ಮದುವೆ ಬಂಧನದಲ್ಲಿ ಬಂಧಿಯಾಗಿದೆ. ಅಬ್ದುಲ್ಲಾಗಿಂತ 42 ವರ್ಷ ದೊಡ್ಡವಳಾಗಿರುವ ಅರಿಯಾನ ಆತನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ವಿಶೇಷವೆಂದರೆ, ಇಬ್ಬರ ಮನೆಯವರು ಸಹ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಅರಿಯಾನ ನಿವೃತ್ತ ಶಿಕ್ಷಕಿಯಾಗಿದ್ದು, ಹಿಂದೊಮ್ಮೆ ಕಾರು ಅಪಘಾತದಿಂದ ಬೆನ್ನಿಗೆ ಏಟು ಬಿದ್ದಿದ್ದರಿಂದ ತನ್ನ ಕೆಲಸವನ್ನು ತ್ಯಜಿಸಿದ್ದಾರೆ. ಅಬ್ದುಲ್ಲಾ ಹೌಸ್ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಕಳೆದ ಒಂದು ವರ್ಷದಿಂದ ಪಾಕಿಸ್ತಾನಕ್ಕೆ ಬರಲು ಅರಿಯಾನ ವೀಸಾಗಾಗಿ ಪ್ರಯತ್ನಿಸುತ್ತಿದ್ದರು. ಆದರೆ, ಅಧಿಕಾರಿಗಳು ವೀಸಾ ನೀಡಲು ನಿರಾಕರಿಸಿದ್ದರು. ಇತ್ತ ಅಬ್ದುಲ್ಲಾ ಸಹ ವೀಸಾಗಾಗಿ ಅರ್ಜಿ ಸಲ್ಲಿಸಿದ್ದನು. ಆತನಿಗೂ ಸಹ ಸಿಕ್ಕಿರಲಿಲ್ಲ. ಇದರ ನಡುವೆ ಫೋನ್ ಕಾಲ್ ಮೂಲಕವೇ ಇಬ್ಬರು ಸಂಪರ್ಕದಲ್ಲಿದ್ದರು. ಕೊನೆಗೆ ಜೆಕ್ ಗಣರಾಜ್ಯದಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಗೆ ಭೇಟಿ ನೀಡಿದ ಅರಿಯಾನ ವೀಸಾ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೂ ಇಬ್ಬರು ಮೂರು ವರ್ಷಗಳ ಬಳಿಕ ಪಾಕಿಸ್ತಾನ ರಾಯಭಾರ ಕಚೇರಿಯ ಸಹಾಯದಿಂದ ಒಂದಾಗಿದ್ದಾರೆ.
ಇಬ್ಬರು ಜೆಕ್ ಗಣರಾಜ್ಯದಲ್ಲಿ ಉಳಿದುಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ. ನಿವೃತ್ತ ಶಾಲಾ ಶಿಕ್ಷಕಿಯಾಗಿರುವ ಅರಿಯಾನ, ಅಬ್ದುಲ್ಲಾಗೆ ಇಂಗ್ಲಿಷ್ ಹೇಳಿಕೊಡಲು ಯತ್ನಿಸುತ್ತಿದ್ದಾರೆ. ಅಲ್ಲದೆ, ಮಗು ಮಾಡಿಕೊಳ್ಳುವ ಯೋಜನೆಯನ್ನು ಮಾಡಿದ್ದಾರೆ. ಆದರೆ, ವೈದ್ಯರು ಬೇಡವೆಂದು ಎಚ್ಚರಿಸಿದ್ದಾರೆ. ಈ ವಯಸ್ಸಿನಲ್ಲಿ ಮಗು ಮಾಡಿಕೊಳ್ಳುವುದ ಒಳ್ಳೆಯದಲ್ಲ ಎಂದು ಅರಿಯಾನಗೆ ಸಲಹೆ ನೀಡಿದ್ದಾರೆ.
ಮದುವೆ ಬಳಿಕ ಪಾಕಿಸ್ತಾನದ ಸ್ಥಳೀಯ ಚಾನೆಲ್ ಒಂದಕ್ಕೆ ದಂಪತಿ ಸಂದರ್ಶನ ನೀಡಿದ್ದು, ಈ ವೇಳೆ ಮಾತನಾಡಿ ಅಬ್ದುಲ್ಲ, ಅರಿಯಾನ ಬ್ರಹ್ಮಚರ್ಯೆ ಎಂಬುದನ್ನು ತಿಳಿದು ನನಗೆ ಶಾಕ್ ಆಯಿತು ಎಂದಿದ್ದಾನೆ. ಹಿರಿಯ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ಏನು ಅನಿಸುತ್ತಿದೆ ಎಂದು ಪ್ರಶ್ನಿಸಿದ್ದಕ್ಕೆ, ಇದಕ್ಕಿಂತ ಸುಂದರವಾದದ್ದು ಏನಿಲ್ಲ. ನಾನು ಕೂಡ ಬ್ರಹ್ಮಚರ್ಯೆಯಾಗಿದ್ದು, ಹಿಂದೆ ನಾನು ಮದುವೆಯಾಗಿಲ್ಲ. ತುಂಬಾ ಮಕ್ಕಳನ್ನು ಹೊಂದುವ ಆಸೆ ಇದೆ ಎಂದಿದ್ದಾನೆ.
ಅರಿಯಾನ ಮಾತನಾಡಿ, ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಆದರೆ, ನಾನು ನನ್ನ ದೇಶಕ್ಕೆ ಮರಳಲೇಬೇಕಿದ್ದು, ನನ್ನ ಪತಿಯೊಂದಿಗೆ ನಾನು ವಾಸಿಸುತ್ತೇನೆ ಎಂದಿದ್ದಾರೆ. ಚಿಕ್ಕ ಹುಡುಗನನ್ನು ಮದುವೆಯಾಗಿದ್ದಕ್ಕೆ ನಿಮಗೆ ಏನನಿಸುತ್ತದೆ ಎಂದು ಪ್ರಶ್ನಿಸಿದ್ದಕ್ಕೆ ಅಬ್ದುಲ್ಲಾ ತುಂಬಾ ಹಠಮಾರಿ ಮತ್ತು ಅವನನ್ನು ಮದುವೆಯಾಗಲು ನನ್ನನ್ನು ಒತ್ತಾಯಿಸಲು ತನ್ನ ಆತ್ಮವನ್ನೇ ಬಳಸಿದನು. ನಮ್ಮ ಪ್ರೀತಿಯಲ್ಲಿ ವಯಸ್ಸಿನ ಅಂತರದ ಮಾತೇ ಇಲ್ಲ. ನಮ್ಮ ನಡುವೆ ಇರುವುದು ಪ್ರೀತಿಯಷ್ಟೇ ಎಂದಿದ್ದಾರೆ. (ಏಜೆನ್ಸೀಸ್)