ಒಂದು ತಾಸಿನಲ್ಲಿ 600 ಅರ್ಧ ಹೆಲ್ಮೆಟ್ ಸೀಜ್

Helmet Seized by Traffic Police
ಶಿವಪ್ಪ ನಾಯಕ ವೃತ್ತದಲ್ಲಿ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು ರಾಶಿ ಹಾಕಿದ್ದ ಐಎಸ್‌ಐ ಪ್ರಾಮಾಣಿತವಲ್ಲದ ಅರ್ಧ ಹೆಲ್ಮೆಟ್‌ಗಳು.
Published on

ಶಿವಮೊಗ್ಗ: ನಗರದಲ್ಲಿ ಸುರಿಯುತ್ತಿರುವ ಮಳೆ ನಡುವೆಯೂ ಸಂಚಾರ ಪೊಲೀಸರು ಮಂಗಳವಾರ ಸಂಚಾರ ನಿಯಮ ಪಾಲನೆಗೆ ಸಂಬಂಧಿಸಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, 600 ಐಎಸ್‌ಐ ಪ್ರಮಾಣಿತವಲ್ಲದ ಹಾಗೂ ಅರ್ಧ(ಹಾಫ್) ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದು ಜಾಗೃತಿ ಮೂಡಿಸಿದರು.

ನಗರದ ಶಿವಪ್ಪ ನಾಯಕ ವೃತ್ತ ಮತ್ತು ಖಾಸಗಿ ಬಸ್ ನಿಲ್ದಾಣ ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ವೃತ್ತದ ಬಳಿ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್‌ಕುಮಾರ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಗಳ ಸಿಬ್ಬಂದಿ ಅರ್ಧ ಹೆಲ್ಮೆಟ್ ಧರಿಸಿದ ಬೈಕ್ ಸವಾರರನ್ನು ತಡೆದು ಐಎಸ್‌ಐ ಪ್ರಮಾಣಿತವಲ್ಲದ ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡರು.
ಅರ್ಧ ಹೆಲ್ಮೆಟ್ ಧರಿಸುವುದರಿಂದ ಆಗುವ ತೊಂದರೆ ಮತ್ತು ಐಎಸ್‌ಐ ಪ್ರಮಾಣಿತ ಹೆಲ್ಮೆಟ್ ಧರಿಸುವುದರಿಂದ ಆಗುವ ಉಪಯೋಗಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ ಜಾಗೃತಿ ಮೂಡಿಸಿದರು. ಮುಂದಿನ ದಿನಗಳಲ್ಲಿ ಅರ್ಧ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವವರ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕಳಪೆ ಹೆಲ್ಮೆಟ್‌ಗಳನ್ನು ಧರಿಸಿಕೊಂಡು ಬಂದ ಸವಾರರಿಗೆ ಪೊಲೀಸರ ಈ ಕಾರ್ಯಾಚರಣೆ ಕಿರಿಕಿರಿ ಮೂಡಿಸಿತು. ಇದೇ ವಿಚಾರವಾಗಿ ಪೊಲೀಸರ ಜತೆ ಕೆಲವರು ವಾಗ್ವಾದಕ್ಕೂ ಇಳಿದಿದ್ದರು. ಆದರೆ ಎಲ್ಲರಿಗೂ ಪೊಲೀಸರು ತಾಳ್ಮೆಯಿಂದ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net