

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ನಿವೇಶನರಹಿತರಿಗೆ ಹಕ್ಕುಪತ್ರಗಳನ್ನು ವಿತರಿಸುವ ಪ್ರಕ್ರಿಯೆಗೆ ವೇಗ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಈಗಾಗಲೇ ಆಶ್ರಯ ವಸತಿ ಯೋಜನೆಯಡಿ ವಸತಿ ರಹಿತರಿಗಾಗಿ 600 ಎಕರೆಗಿಂತಲೂ ಹೆಚ್ಚು ಜಮೀನು ಮಂಜೂರಾಗಿದೆ. ಜಿಲ್ಲಾಡಳಿತ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಡಿ ನಿವೇಶನ ರಹಿತರಿಗೆ ಹಕ್ಕುಪತ್ರಗಳನ್ನು ಜುಲೈ, ಆಗಸ್ಟ್‌ನಲ್ಲಿ ವಿತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಆರ್.ಲತಾ ಅಧಿಕಾರಿಗೆ ಸೂಚಿಸಿದ್ದಾರೆ.
ಕಳೆದ 4 ತಿಂಗಳ ಹಿಂದೆಯೇ ಫಲಾನುಭವಿಗೆ ಹಕ್ಕು ಪತ್ರ ವಿತರಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕರೊನಾ 2 ನೇ ಅಲೆಯ ತೀವ್ರತೆಯು ಅಡ್ಡಿಯಾಯಿತು. ಜಿಲ್ಲೆಯಲ್ಲಿ ಪಾಸಿಟಿವ್ ದರ ನಿಯಂತ್ರಿಸಿ, ಸೋಂಕಿಗೆ ಕಡಿವಾಣ ಹಾಕುವಲ್ಲಿ ಹೆಚ್ಚಿನ ಗಮನಹರಿಸಬೇಕಾಯಿತು. ಇದೀಗ ಆತಂಕದ ಪರಿಸ್ಥಿತಿ ದೂರವಾಗಿದೆ. ಅಭಿವೃದ್ಧಿ ಕೆಲಸ ಮತ್ತು ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಚುರುಕುಗೊಳಿಸಲಾಗುತ್ತಿದೆ.
3 ತಿಂಗಳಲ್ಲಿ ಅಭಿಯಾನ : ನಿವೇಶನ ರಹಿತರು ಸ್ವಂತ ಸೂರಿಗೆ ಎದುರು ನೋಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಯಾ ತಾಲೂಕು ವ್ಯಾಪ್ತಿಯಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸಿ, ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈಗಾಗಲೇ 600 ಎಕರೆ ಜಮೀನು ವಸತಿ ಯೋಜನೆಗೆ ಗುರುತಿಸಿದ್ದು ಭೂ ಪರಿವರ್ತನೆ, ನಿವೇಶನ ವಿಂಗಡಣೆ ಸೇರಿ ನಾನಾ ಪ್ರಕ್ರಿಯೆಗಳು ನಡೆಯುತ್ತಿವೆ.
ಇದರ ನಡುವೆ ನಿವೇಶನ ರಹಿತರೆಲ್ಲರಿಗೂ 30*20 ಅಳತೆಯ ನಿವೇಶನಗಳನ್ನು ನೀಡುವ ಯೋಜನೆ ಹೊಂದಲಾಗಿದೆ. ಇದಕ್ಕೆ ಆಶ್ರಯ ಯೊಜನೆಯಡಿ ಗ್ರಾಮೀಣ ಭಾಗದಲ್ಲಿ 32000 ಮತ್ತು ನಗರ ವ್ಯಾಪ್ತಿಯಲ್ಲಿ 6000 ಸೇರಿ 38 ಸಾವಿರ ನಿವೇಶನಗಳನ್ನು ವಿತರಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ರೂಪುರೇಷೆಯಂತೆ 3 ತಿಂಗಳಲ್ಲಿ ಅಭಿಯಾನ ನಡೆಯಲಿದೆ.
ಭೂಮಿ ಮಂಜೂರು : ಗ್ರಾಮೀಣ ಭಾಗದಲ್ಲಿ ನಿವೇಶನ ಹಂಚಿಕೆಗೆ 617.05 ಎಕರೆ ಜಮೀನು ಗುರುತಿಸಲಾಗಿದ್ದು ಈ ಪೈಕಿ 479.63 ಎಕರೆ ಜಮೀನು ಈಗಾಗಲೇ ಮಂಜೂರಾಗಿದೆ. ಈ ಪೈಕಿ 203 ಎಕರೆ ಜಮೀನಿಗೆ ಬಡಾವಣೆ ನಕ್ಷೆ ಮಾಡಲಾಗಿದೆ. 93.29 ಎಕರೆ ಜಮೀನನ್ನು ಅಭಿವೃದ್ಧಿಗೊಳಿಸಲಾಗಿದೆ. 31.21 ಎಕರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. 44.05 ಎಕರೆಗೆ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನುಳಿದಂತೆ 149.41 ಎಕರೆ ಜಮೀನು ಮಂಜೂರಾತಿ ಪ್ರಕ್ರಿಯೆಯ ನಡೆಯಬೇಕಾಗಿದೆ. ನಗರ ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿನ ನಿವೇಶನ ಹಂಚಿಕೆಗೆ 205.05 ಎಕರೆ ಜಮೀನು ಈಗಾಗಲೇ ಮಂಜೂರಾಗಿದ್ದು ಈ ಪೈಕಿ 140.32 ಎಕರೆಗೆ ಬಡಾವಣೆ ನಕ್ಷೆ ಸಿದ್ಧಪಡಿಸಲಾಗಿದೆ. ಉಳಿದಂತೆ ಹಕ್ಕು ಪತ್ರ ಪಡೆಯಲು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
38 ಸಾವಿರ ನಿವೇಶನಗಳ ಹಂಚಿಕೆಯ ಗುರಿ ಸಾಧನೆಯು ಜಿಲ್ಲೆಯ ಮಟ್ಟಿಗೆ ದಾಖಲೆಯ ಮೈಲಿಗಲ್ಲು. ಇದು ತ್ವರಿತವಾಗಿ ಸಾಕಾರಗೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆರ್.ಲತಾ, ಜಿಲ್ಲಾಧಿಕಾರಿ