60 ಪರ್ಸೆಂಟ್ ಕಮಿಷನ್ ಆರೋಪ ಕೂಡ ತನಿಖೆಯಾಗಲಿ: ಬಸವರಾಜ ಬೊಮ್ಮಾಯಿ|60 percent commission

mng- sep 14- Basavaraja Bommayi
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕೇಳಿ ಬಂದಿರುವ 60 ಪರ್ಸೆಂಟ್ ಕಮಿಷನ್ ಆರೋಪವನ್ನೂ ಸೇರಿಸಿ ಎಸ್‌ಐಟಿ ತನಿಖೆ(60 percent commission allegation should also be investigated)ಗೆ ವಹಿಸುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಆರೋಪದ ತನಿಖೆಗೆ ಎಸ್‌ಐಟಿ ರಚಿಸಲು ತೀರ್ಮಾನಿಸಿರುವ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು, 40 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಸುಳ್ಳು ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಈಗಾಗಲೇ ಆಯೋಗ ರಚನೆ ಮಾಡಿದ್ದರು. ಆ ಕಮಿಷನ್ ವರದಿಯಲ್ಲಿ ಏನಿದೆ ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕು. ಈ ಸರ್ಕಾರ ಕದ್ದು ಮುಚ್ಚಿ ಯಾಕೆ ಮಾಡುತ್ತಾರೆ. ಕಳೆದ ಎರಡು ವರ್ಷದಲ್ಲಿ ಈ ಸರ್ಕಾರದ ವಿರುದ್ದ 60 ಪರ್ಸೆಂಟ್ ಆರೋಪ ಕೇಳಿ ಬಂದಿದೆ. ಅದನ್ನೂ ಸೇರಿಸಿ ಎಸ್‌ಐಟಿ ತನಿಖೆಗೆ ಕೊಡಲಿ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದಲ್ಲಿ 60 ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪಿಡಬ್ಲುಡಿ, ಅಬಕಾರಿ, ಎಲೆಕ್ಟ್ರಿಕ್ ಕಂಟ್ರಾಕ್ಟರ್ ಅಸೊಸಿಯೇಷನ್‌ನವರು ಬಹಿರಂಗ ಆರೋಪ ಮಾಡಿದ್ದಾರೆ. ತಮ್ಮ ಸರ್ಕಾರದಲ್ಲಿ ನಡೆದಿರುವ ಆರೋಪದ ಸಮೇತ ತನಿಖೆ ಮಾಡಬೇಕು. ನಮ್ಮ ಮೇಲೆ ಸುಳ್ಳು ಪ್ರಚಾರ ರಾಜಕಿಯ ದ್ವೇಷದಿಂದ ಮಾಡಿರುವುದಕ್ಕೆ ಎಲ್ಲಿ ದಾಖಲೆ ಸಿಗುತ್ತದೆ. ಈಗ ಸಿಎಂ ಹಾಗೂ ಡಿಸಿಎಂ ಅವರು ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ಕಂಪ್ಲೆಂಟ್ ಕೊಡಿ ಅಂತ ಹೇಳುತ್ತಾರೆ. ನಾವು ಇದ್ದಾಗಲೂ ಲೊಕಾಯುಕ್ತಕ್ಕೆ ದೂರು ಕೊಡಿ ಅಂತ ಹೇಳಿದ್ದೆ ಕೊಡಲಿಲ್ಲ ಎಂದು ಹೇಳಿದರು.

ಗುತ್ತಿಗೆದಾರರು ಮಾಡಿರುವ ಕಾಮಗಾರಿಗೆ ಹಿರಿತನದ ಆಧಾರದಲ್ಲಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ, ಮಾಡಿದ ಕೆಲಸಕ್ಕೆ ಕೊಡಲು ಹಣ ಇಲ್ಲ. ಹೀಗಾಗಿ ಗುತ್ತಿಗೆದಾರರು ಟೆಂಡರ್ ಆಗಿದ್ದರೂ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

ಜಾತಿ ಗಣತಿ ರಾಜಕಾರಣ

ಈ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ರಾಜಕಾರಣ ಮಾಡುತ್ತಿದೆ. ಮೊದಲೇ ಗಣತಿ ಮಾಡುವ ಮುಂಚೆ ಜಾತಿ ಗಣತಿ ಅಂತ ಆದೇಶ ಮಾಡಬೇಕಿತ್ತು. ಸಾಮಾಜಿಕ ಆರ್ಥಿಕ ಸಮೀಕ್ಷೆ ಅಂತ ಹೇಳಿ ಜಾತಿ ಬರೆಸಿಕೊಂಡು ಬಂದಿದ್ದಾರೆ. ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಕೊಟ್ಟ ವರದಿಗೆ ಕಾರ್ಯದರ್ಶಿ, ಸದಸ್ಯರು ಸಹಿ ಹಾಕಿಲ್ಲ. ಇನ್ಬೊಬ್ಬ ಅಧ್ಯಕ್ಷರು ಅದಕ್ಕೆ ತೇಪೆ ಹಚ್ಚಿರುವ ವರದಿ ನೀಡಿದ್ದಾರೆ. ಈ ಸರ್ಕಾರಕ್ಕೆ ಹಿಂದುಳಿದ ವರ್ಗದವರ ಬಗ್ಗೆ ಕಾಳಜಿ ಇದ್ದರೆ ವರದಿಯನ್ನು ಬಹಿರಂಗ ಮಾಡಿ, ಅವರಿಗಾಗಿ ಏನು ಯೋಜನೆ ಮಾಡುತ್ತಾರೆ ಅದನ್ನು ಹೇಳಬೇಕು. ನಿನ್ನೆಯ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಹೇಳಿದ್ದರು. ಈಗ ಮತ್ತೆ ಮುಂದಿನ ಸಂಪುಟದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ಅದರ ಅಧ್ಯಯನಕ್ಕೆ ಮತ್ತೊಂದು ಸಂಪುಟ ಉಪ ಸಮಿತಿ ಮಾಡುತ್ತಾರೆ. ಮುಖ್ಯಮಂತ್ರಿಗಳು ಹಿಂದುಳಿದವರ ಬಗ್ಗೆ ಕೇವಲ ಭಾಷಣ ಮಾಡುವುದರಿಂದ ಹೊಟ್ಟೆ ತುಂಬಲ್ಲ. ಮುಖ್ಯಮಂತ್ರಿಗಳು ಸುಮಾರು ಮೂರ್ನಾಲ್ಕು ವರ್ಷದಿಂದ ಅದನ್ನೇ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಕಮಿಟ್‌ಮೆಂಟ್ ಇಲ್ಲ. ಎಲ್ಲಿ ಕಮಿಟ್‌ಮೆಂಟ್ ಇರುವುದಿಲ್ಲವೋ ಅಲ್ಲಿ ಕಮಿಟಿ ನೇಮಕ ಆಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net