

ಬೆಂಗಳೂರು: ಆಸ್ಟ್ರೇಲಿಯಾ ಪ್ರಜೆಯನ್ನು ಅಪಹರಿಸಿ ಒಂದೂವರೆ ಲಕ್ಷ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದ ತಮಿಳುನಾಡು ಮೂಲದ ಆರು ಮಂದಿ ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಸಮೀಪದ ಚನ್ನಕೇಶವ ನಗರ ನಿವಾಸಿ ಮೋನಿಷ್ ಅಲಿಯಾಸ್ ಮನು (೨೪), ಹೊಂಗಸಂದ್ರ ನಿವಾಸಿ ಲೋಕೇಶ್ (೨), ಬೊಮ್ಮನಹಳ್ಳಿ ನಿವಾಸಿ ಕಿಶೋರ ಶಿವ (೧೯), ಎಂ.ಆದಿ ಅಲಿಯಾಸ್ ಆಥಿ (೨೧), ಜಯನಗರ ನಿವಾಸಿ ದಿಲೀಪ್ ಕುಮಾರ್ (೨೬) ಮತ್ತು ತಿಲಕನಗರ ನಿವಾಸಿ ಸತೀಶ್(೨೫) ಬಂಧಿತರು.
ಆರೋಪಿಗಳು ಫೆ.೫ರಂದು ಆಸ್ಟ್ರೇಲಿಯಾ ಪ್ರಜೆ ಅಲೋಕ್ ರಾಣಾ ಎಂಬುವರನ್ನು ಅಪಹರಿಸಿದ್ದರು. ಈ ಸಂಬಂಧ ಅಲೋಕ್ ರಾಣಾ ಸಹೋದರ ಅಮೀತ್ ರಾಣಾ ಫೆ.೨೦ರಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಕೇವಲ ಆರೇಳು ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ೧೮ ಸಾವಿರ ರೂ. ನಗದು, ಮೊಬೈಲ್ ಮತ್ತು ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಮೂಲತಃ ತಮಿಳುನಾಡಿನವರಾಗಿದ್ದು, ಪರಸ್ಪರ ಸ್ನೇಹಿತರಾಗಿದ್ದಾರೆ. ೨-೩ ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಆರೋಪಿಗಳ ಪೈಕಿ ಮೋನಿಷ್ ಪಿಜಿಯಲ್ಲಿ ವಾಸವಾಗಿದ್ದು, ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂದ್ದ. ಜತೆಗೆ ಬಿಡುವಿನ ವೇಳೆಯಲ್ಲಿ ಟ್ಯಾಟು ಹಾಕುತ್ತಿದ್ದ. ಜತೆಗೆ ಗಾಂಜಾ ವ್ಯಾಪಾರ ಮಾಡುತ್ತಿದ್ದ. ಲೋಕೇಶ್, ಸಣ್ಣ ಹೋಟೆಲ್ ನಡೆಸುತ್ತಿದ್ದ. ಕಿಶೋರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ಆದಿ, ದಿಲೀಪ್ ಕುಮಾರ್, ಸತೀಶ್ ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು.
ಗಾಂಜಾ ಖರೀದಿಗೆ ಬಂದ ವೇಳೆ ಅಪಹರಣ:
ಕೆಲ ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾಗೆ ತೆರಳಿದ್ದ ಅಪಹೃತ ಅಲೋಕ್ ರಾಣಾ, ಅಲ್ಲಿನ ಪೌರತ್ವ ಪಡೆದುಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ವಾಸವಾಗಿರುವ ಸಹೋದರ ಅಮಿತ್ ರಾಣಾ ಮನೆಗೆ ಬಂದಿದ್ದಾರೆ. ಈ ವೇಳೆ ಪರಿಚಯಸ್ಥರ ಮೂಲಕ ಮೋನಿಷ್ ಪರಿಚಯವಾಗಿದ್ದು, ಆತನಿಂದ ಪದೇ ಪದೇ ಗಾಂಜಾ ಖರೀದಿಸುತ್ತಿದ್ದರು. ಈ ವೇಳೆ ಯಾವುದೇ ಚೌಕಾಸಿ ಮಾಡದೇ ಮೋನಿಷ್ ಕೇಳಿದ ಹಣ ನೀಡುತ್ತಿದ್ದ. ಅದರಿಂದ ಅನುಮಾನಗೊಂಡ ಮೋನಿಷ್, ಅಲೋಕ್ ರಾಣಾನ ಬಗ್ಗೆ ವಿಚಾರಿಸಿದ್ದಾನೆ. ಆತ ಆಸ್ಟ್ರೇಲಿಯಾ ಪ್ರಜೆ. ಆತನ ಬಳಿ ಲಕ್ಷಾಂತರ ರೂ. ಇದೆ ಎಂಬುದು ಗೊತ್ತಾಗಿದೆ. ಬಳಿಕ ಈ ವಿಚಾರವನ್ನು ತನ್ನ ಸಹಚರರಿಗೆ ತಿಳಿಸಿ, ಅಲೋಕ್ ರಾಣಾನ ಅಪಹರಿಸಿ, ಲಕ್ಷಾಂತರ ರೂ. ಸುಲಿಗೆಗೆ ಎಲ್ಲರೂ ಸೇರಿ ಸಂಚು ರೂಪಿಸಿದ್ದಾರೆ.
ಈ ಮಧ್ಯೆ ಫೆ.೫ರಂದು ಸಂಜೆ ೪ ಗಂಟೆ ಸುಮಾರಿಗೆ ಅಲೋಕ್ ರಾಣಾ, ಮೋನಿಷ್‌ಗೆ ಕರೆ ಮಾಡಿ ಗಾಂಜಾ ಕೇಳಿದ್ದಾನೆ. ಆಗ ಬೊಮ್ಮನಹಳ್ಳಿಯ ಲಾರ್ವೆನ್ಸ್ ಪಬ್ಲಿಕ್ ಶಾಲೆ ಹಿಂಭಾಗಕ್ಕೆ ಕರೆಸಿಕೊಂಡಿದ್ದಾನೆ. ಕಾರಿನಲ್ಲಿ ಬಂದಿದ್ದ ಅಲೋಕ್ ರಾಣಾನ ಆತನ ಕಾರಿನಲ್ಲೇ ಅಪಹರಿಸಿದ ಆರೋಪಿಗಳು, ೩ನೇ ಆರೋಪಿ ಕಿಶೋರ ಶಿವನ ಬಾಡಿಗೆ ಮನೆಗೆ ಕರೆದೊಯ್ದು, ಹಣ ಕೊಡುವಂತೆ ಹಲ್ಲೆ ನಡೆಸಿದ್ದಾರೆ.
ಆ ನಂತರ ಅರವಿಂದ್ ಎಂಬ ಹೆಸರಿಗೆ ೭೮ ಸಾವಿರ ರೂ. ಅನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ. ಬಳಿಕ ಆದಿ ಖಾತೆಗೆ ೨೦ ಸಾವಿರ ರೂ. ವರ್ಗಾಹಿಸಿಕೊಂಡಿದ್ದಾರೆ. ಅಲ್ಲದೆ, ಮತ್ತೊಮ್ಮೆ ಹಲ್ಲೆ ನಡೆಸಿ, ಸಹೋದರ ಅಮೀತ್ ರಾಣಾನಿಂದ ತುರ್ತು ಸಮಸ್ಯೆ ಎಂದು ೪೦ ಸಾವಿರ ರೂ. ವರ್ಗಾಹಿಸಿಕೊಳ್ಳುವಂತೆ ಹೇಳಿ, ಆ ಹಣವನ್ನು ಆರೋಪಿಗಳು ಸುಲಿಗೆ ಮಾಡಿದ್ದಾರೆ. ಅಷ್ಟಾದರೂ ಬಿಡದ ಆರೋಪಿಗಳು, ಮತ್ತೊಮ್ಮೆ ಅಮೀತ್‌ರಾಣಗೆ ಕರೆ ಮಾಡಿಸಿ, ಹಣಕ್ಕೆ ಬೇಡಿಕೆ ಇಡಿಸಿದ್ದಾರೆ. ಅದರಿಂದ ಅನುಮಾನಗೊಂಡ ಅಮೀತ್ ರಾಣಾ, ಅಲೋಕ್ ರಾಣಾನ ಕಾರಿನ ಜಿಪಿಎಸ್ ಆಧರಿಸಿ ಸ್ಥಳಕ್ಕೆ ತೆರೆಳಿದ್ದಾರೆ. ಆಗ ಆರೋಪಿಗಳು ಸಹೋದರನನ್ನು ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದರು ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.