

ಬೆಂಗಳೂರು: ಶಕ್ತಿ ಯೋಜನೆ ಜಾರಿಯಾಗಿ 6 ತಿಂಗಳುಗಳಷ್ಟೇ ಪೂರೈಸಿದ್ದರೂ ಸಾಧನೆ ಬೆಟ್ಟದಷ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಶಕ್ತಿ ಯೋಜನೆ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಶಿಕ್ಷಣ, ಉದ್ಯೋಗ, ದೇವರ ದರ್ಶನ ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು ೧೨೬ ಕೋಟಿಗೂ ಅಧಿಕ ಉಚಿತ ಟಿಕೇಟ್ ಪಡೆದು ಪ್ರಯಾಣ ಬೆಳೆಸಿದ್ದು, ಈ ವರೆಗಿನ ಒಟ್ಟು ಟಿಕೇಟ್ ಮೌಲ್ಯ ರೂ. ೩,೦೦೦ ಕೋಟಿ ರೂ. ದಾಟಿದೆ. ಮಹಿಳಾ ಸಬಲೀಕರಣದ ಈ ಯೋಜನೆಗೆ ಹೆಣ್ಣುಮಕ್ಕಳಿಂದ ವ್ಯಕ್ತವಾಗುತ್ತಿರುವ ಅಭೂತಪೂರ್ವ ಸ್ಪಂದನೆ ಕಂಡು ಖುಷಿಯಾಗುತ್ತಿದೆ. ಯೋಜನೆಯಿಂದ ಲಾಭ ಪಡೆದು ಮತ್ತಷ್ಟು ಹೆಣ್ಣುಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.