

ನೋಯ್ಡಾ: ತಪ್ಪು ಕೋವಿಡ್ ವರದಿ ನೀಡಿ ಅನಗತ್ಯವಾಗಿ 35 ಜನರನ್ನು 3 ದಿನ ಕ್ವಾರಂಟೈನ್ನಲ್ಲಿ ಇರಿಸುವಂತೆ ಮಾಡಿದ್ದಕ್ಕಾಗಿ ನೋಯ್ಡಾದ ಖಾಸಗಿ ಪ್ರಯೋಗಾಲಯದ ವಿರುದ್ಧ ದೂರು ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಕೆಲವು ಪ್ರಯೋಗಾಲಯಗಳಿಗೆ ನೋಯ್ಡಾ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಪೊಲೀಸರು ಒಂದು ಆ ಪ್ರಯೋಗಾಲಯದ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನೆಗಡಿ, ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೋಯ್ಡಾದ 35 ಮಂದಿ ಖಾಸಗಿ ಚಿಕಿತ್ಸಾಲಯದಲ್ಲಿ ಪರೀಕ್ಷೆಗೆ ಒಳಪಟ್ಟಿದ್ದರು. ತಕ್ಷಣವೇ ಅವರೆಲ್ಲರನ್ನೂ ಕೋವಿಡ್ ಪರೀಕ್ಷೆಗೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರೆಲ್ಲರೂ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು.
ಅವರೆಲ್ಲರಿಗೂ ಕರೊನಾ ಸೋಂಕು ತಗುಲಿರುವುದಾಗಿ ಪ್ರಯೋಗಾಲಯಗಳ ವರದಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ 35 ಜನರನ್ನು ಸರ್ಕಾರಿ ಕ್ವಾರಂಟೈನ್ ಸೌಲಭ್ಯದಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಇವರೆಲ್ಲರ ಗಂಟಲ ದ್ರವದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ರಾಷ್ಟ್ರೀಯ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್ಐವಿ) ಕಳುಹಿಸಿದಾಗ ಅವರಲ್ಲಿ ಯಾರಿಗೂ ಕರೊನಾ ಸೋಂಕು ಇಲ್ಲ ಎಂಬುದು ಖಚಿತಪಟ್ಟಿತ್ತು. ಇದು ಆರೋಗ್ಯಾಧಿಕಾರಿಗಳನ್ನು ವಿಚಲಿತಗೊಳಿಸಿತ್ತು. ತಕ್ಷಣವೇ ಅವರು ಕ್ವಾರಂಟೈನ್ ಕೇಂದ್ರದಲ್ಲಿದ್ದ ಈ ಎಲ್ಲ 35 ಜನರನ್ನು ಬಿಡುಗಡೆ ಮಾಡಿದರು ಎನ್ನಲಾಗಿದೆ.
ಆದರೂ ಆ ಎಲ್ಲ 35 ಜನರ ಮೇಲೆ ನಿಗಾ ಇರಿಸಲಾಗಿದೆ. ಇವರೆಲ್ಲರಿಗೂ ಕೋವಿಡ್ ಸೋಂಕು ತಗುಲಿರುವುದಾಗಿ 6 ಪ್ರಯೋಗಾಲಯಗಳು ವರದಿ ನೀಡಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವುಗಳ ಮೇಲೂ ನಿಗಾಯಿರಿಸಲಾಗಿದೆ. ಒಂದು ಪ್ರಯೋಗಾಲಯದ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು, ಅದರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಉಳಿದ 5 ಪ್ರಯೋಗಾಲಯಗಳಿಗೆ ನೋಟಿಸ್ ನೀಡಲಾಗಿದೆ ಎಂದು ನೋಯ್ಡಾದ ಮುಖ್ಯ ವೈದ್ಯಾಧಿಕಾರಿ ದೀಪ್ ಓಹ್ರಿ ತಿಳಿಸಿದ್ದಾರೆ.
ಕೋವಿಡ್ ಪರೀಕ್ಷೆ ವೇಳೆ ಈ ಪ್ರಯೋಗಾಲಯಗಳು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದ್ದರಿಂದ, ಪ್ರಯೋಗಾಲಯದ ಅಧಿಕಾರಿಗಳು ನೋಟಿಸ್ಗೆ ನೀಡುವ ಪ್ರತಿಕ್ರಿಯೆಯನ್ನು ಆಧರಿಸಿ ಆ 5 ಪ್ರಯೋಗಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶಂಕಿತ ಸೋಂಕಿತರಿಂದ ಸಂಗ್ರಹಿಸಲಾಗಿದ್ದ ಗಂಟಲದ್ರವ ಮಾದರಿಯನ್ನು ಪ್ರಯೋಗಾಲಯದ ಉದ್ಯೋಗಿಗಳು ಸಮರ್ಪಕವಾದ ತಾಪಮಾನದಲ್ಲಿ ಇರಿಸದೇ ಹೋಗಿದ್ದು ತಪ್ಪು ವರದಿ ಬರಲು ಕಾರಣ ಎಂಬುದು ಮೇಲ್ನೋಟಕ್ಕೇ ಸಾಬೀತಾಗಿದೆ. ಅಲ್ಲದೆ, ಈ ಪ್ರಯೋಗಾಲಯಗಳು ಕೋವಿಡ್-19 ಪರೀಕ್ಷೆ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನೋಂದಣಿಯನ್ನೂ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ. ಜತೆಗೆ ಕೋವಿಡ್-19 ಪರೀಕ್ಷೆಗೆ 4,500ರಿಂದ 5 ಸಾವಿರ ರೂ. ಶುಲ್ಕ ವಸೂಲಿ ಮಾಡಿದ್ದವು ಎನ್ನಲಾಗಿದೆ.