

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ, ತಮ್ಮ ವಿರುದ್ಧ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ಸೂಚನೆ ನೀಡಲು ಬಿಜೆಪಿ ಸೇರಿ ಸಚಿವರಾಗಿರುವ ಆರು ಮಂದಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ ಪಾಟೀಲ್, ಕ್ರೀಡಾ ಸಚಿವ ನಾರಾಯಣ ಗೌಡ, ಆರೋಗ್ಯ ಸಚಿವ ಕೆ ಸುಧಾಕರ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಮಾಧ್ಯಮಗಳು ತಮ್ಮ ವಿರುದ್ಧ ವರದಿ ಬಿತ್ತರಿಸದಂತೆ ಮುಂಗಡವಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಮಿತ್ರ ಮಂಡಳಿ ಕ್ಯಾಂಪ್ನ ಇನ್ನೊಬ್ಬ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಬಿಡುಗಡೆಯಾಗಿ ಸಾಕಷ್ಟು ಕೋಲಾಹಲ ಸೃಷ್ಟಿಯಾಗಿದ್ದಲ್ಲದೇ ಅವರು ರಾಜೀನಾಮೆ ಕೂಡ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆರೂ ಸಚಿವರು ಇದೀಗ ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಹಾಗೇ ಅನುಮಾನ ಮೂಡಿಸಿದೆ.
ಕಾಂಗ್ರೆಸ್ ಶಾಸಕರಾಗಿದ್ದ ಇವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಮತ್ತೆ ಗೆದ್ದು ಸಚಿವರಾಗಿದ್ದರು. ಬಾಂಬೆಯ ರೆಸಾರ್ಟ್ನಲ್ಲಿ ಬೀಡು ಬಿಟ್ಟು ಕಾಂಗ್ರೆಸ್ ಜೆಡಿಎಸ್ ಸಮ್ಮೀಶ್ರ ಸರ್ಕಾರವನ್ನು ಕೆಡವಿದ್ದರು.