

ಬೆಂಗಳೂರು: ಸೀರೆ ಮಾರಾಟ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ 6 ಮಹಿಳೆಯರು ಹೋಗಿ ದುಬಾರಿ ಬೆಲೆ ಬಾಳುವ 9 ಕಾಂಜಿವರಂ ಸೀರೆಗಳನ್ನು ಕಳವು ಮಾಡಿದ್ದಾರೆ.
ಶಾಂತಿನಗರದ ಲ್ಯಾಂಗಪೋರ್ಡ್ ಟೌನ್‌ನಲ್ಲಿನ ಕಾಂಜಿವರಂ ಸೀರೆ ಅಂಗಡಿಯಲ್ಲಿ ಕಳವಾಗಿದೆ. ಈ ಕುರಿತು ಎಸ್.ಹರೀಶ್ ಎಂಬಾತ ಅಶೋಕನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.ಈ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಮಹಿಳೆಯರ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 3ರ ಮಧ್ಯಾಹ್ನ 2.14ಕ್ಕೆ ಸೀರೆ ಖರೀದಿ ನೆಪದಲ್ಲಿ 6 ಅಪರಿಚಿತ ಮಹಿಳೆಯರು ಗ್ರಾಹಕರ ಸೋಗಿನಲ್ಲಿ ಪ್ರವೇಶ ಮಾಡಿದ್ದಾರೆ. ಮಳಿಗೆ ಸಿಬ್ಬಂದಿಗೆ ಆ ಸೀರೆ ಈ ಸೀರೆ ತೋರಿಸುವಂತೆ ಅಂಗಡಿ ಎಲ್ಲೆಡೆ ಸುತ್ತಾಡಿ 30 ನಿಮಿಷಗಳ ಬಳಿಕ ಸೀರೆ ಖರೀದಿ ಮಾಡದೆ ಹೊರಗೆ ಹೋಗಿದ್ದಾರೆ. ಅನುಮಾನ ಬಂದು ಸೀರೆಗಳನ್ನು ಏಣಿಕೆ ಮಾಡಿದಾಗ 9 ಸೀರೆಗಳು ಕಾಣಿ ಆಗಿರುವುದು ಬೆಳಕಿಗೆ ಬಂದಿದೆ.
ಇವುಗಳ ಬೆಲೆ ಬರೋಬ್ಬರಿ 9.50 ಲಕ್ಷ ರೂ. ಆಗಿದ್ದು, ಆರೋಪಿಗನ್ನು ಪತ್ತೆ ಮಾಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಮಳಿಗೆಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿರುವ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ಮಹಿಳೆಯ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.