ಈ ಬಾರಿ ನಮ್ಮ ಮೆಟ್ರೋಗೆ ಭಾರಿ ನಷ್ಟ: ಆರ್ಥಿಕ ವರದಿ ಬಿಡುಗಡೆ

Metro 28 dec 19
Published on

ಬೆಂಗಳೂರು: ಆರ್ಥಿಕ ವರ್ಷದ ಕೊನೆಯಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತ, ಸಿಬ್ಬಂದಿ ವೇತನ ಪರಿಷ್ಕರಣೆ, ಜಾಹೀರಾತು ಪ್ರದರ್ಶನ ನಿಷೇಧ ಸೇರಿ ಇನ್ನಿತರ ಕಾರಣಗಳಿಂದಾಗಿ ಬಿಎಂಆರ್​ಸಿಎಲ್​ಗೆ 2019-20ನೇ ಸಾಲಿನಲ್ಲಿ 598 ಕೋಟಿ ರೂ. ನಿವ್ವಳ ನಷ್ಟ ಉಂಟಾಗಿದೆ.

ಮೆಟ್ರೋ ರೈಲುಗಳ ಕಾರ್ಯಾಚರಣೆಯಿಂದ 376.88 ಕೋಟಿ ರೂ. ಫೇರ್​ಬಾಕ್ಸ್ ಆದಾಯ ಬಂದಿದೆ. 2018-19ನೇ ಸಾಲಿನಲ್ಲಿ 352.02 ಕೋಟಿ ರೂ. ಆದಾಯ ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 6.16 ಹೆಚ್ಚಿನ ಆದಾಯ ಗಳಿಸಿದಂತಾಗಿದೆ. ನಾನ್ ಫೇರ್ ಬಾಕ್ಸ್​ನಲ್ಲಿ 2018-19ರಲ್ಲಿ 47.33 ಕೋಟಿ ರೂ. ಆದಾಯ ಗಳಿಸಲಾಗಿತ್ತು. ಆದರೆ, ಜಾಹೀರಾತು ಪ್ರದರ್ಶನ ನಿಷೇಧದಿಂದಾಗಿ 5.42 ಕೋಟಿ ರೂ. ನಷ್ಟವಾಗಿದ್ದು, 2019-20ರಲ್ಲಿ 41.91 ಕೋಟಿ ರೂ. ನಾನ್ ಫೇರ್ ಬಾಕ್ಸ್ ಆದಾಯ ಬಂದಿದೆ.

ಜತೆಗೆ, ಆಪರೇಟಿಂಗ್ ಸಿಬ್ಬಂದಿ ವೇತನ ಪರಿಷ್ಕರಣೆಯಿಂದಾಗಿ 2019-20ರಲ್ಲಿ 39.49 ಕೋಟಿ ರೂ. ಹೆಚ್ಚಿನ ಹೊರೆ ಬಿದ್ದಂತಾಗಿದೆ. ಅಲ್ಲದೆ ಎಲ್ಲ ರೈಲುಗಳಿಗೂ 6 ಬೋಗಿಗಳನ್ನು ಅಳವಡಿಸಿರುವುದರಿಂದ ನಿಗಮಕ್ಕೆ ಹೆಚ್ಚು ವೆಚ್ಚವಾಗಿದೆ. ಹಾಗೆಯೇ, ಮೆಟ್ರೋ 1ನೇ ಹಂತದ ಸ್ವತ್ತುಗಳ ಮೇಲಿನ ಸವಕಳಿ ಮತ್ತಿತರ ಕಾರಣಗಳಿಂದ ಈ ಬಾರಿ 598.58 ಕೋಟಿ ರೂ. ನಿವ್ವಳ ನಷ್ಟ ಉಂಟಾಗಿದೆ. 2018-19ನೇ ಸಾಲಿನಲ್ಲಿ ನಿವ್ವಳ ನಷ್ಟದ ಪ್ರಮಾಣ 498.41 ಕೋಟಿ ರೂ. ಇತ್ತು.

ಒಂದೇ ದಿನ 6 ಲಕ್ಷ ಜನರ ಸಂಚಾರ

ರೈಲುಗಳ ಬೋಗಿಯನ್ನು 3ರಿಂದ 6ಕ್ಕೆ ಹೆಚ್ಚಿಸಿದ ಪರಿಣಾಮ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. 2019ರ ಅ. 25ರಂದು 6,01,164 ಜನರು ಮೆಟ್ರೋ ರೈಲು ಸೇವೆ ಬಳಸಿದ್ದು, ಈವರೆಗೆ ಅತಿಹೆಚ್ಚು ಜನರು ಮೆಟ್ರೋ ರೈಲಿನಲ್ಲಿ ಸಂಚರಿಸಿದ ಸಂಖ್ಯೆಯಾಗಿದೆ. ಅದೇ ರೀತಿ 2020ರ ಮಾ. 2ರಂದು 1.67 ಕೋಟಿ ರೂ. ಆದಾಯ ಗಳಿಸಿದ್ದು, ಈವರೆಗಿನ ದಾಖಲೆಯಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 15 ನಿಲ್ದಾಣಗಳಲ್ಲಿ ಹೆಚ್ಚುವರಿಯಾಗಿ 18 ಎಸ್ಕಲೇಟರ್​ಗಳನ್ನು ಅಳವಡಿಸಲಾಗಿದೆ. ರಸ್ತೆ ದಾಟುವ ಪ್ರಯಾಣಿಕರಿಗಾಗಿ ನಿಲ್ದಾಣಗಳ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಸೇರಿ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ಪ್ರಾಯೋಗಿಕವಾಗಿ ಮೆಟ್ರೋ ರೈಲು ಸಂಚಾರ ಆರಂಭ

ಬೆಂಗಳೂರು: ಮೆಟ್ರೋ 2ನೇ ಹಂತದ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್​ಶಿಪ್ ಮಾರ್ಗದಲ್ಲಿ ಗುರುವಾರ ಪ್ರಾಯೋಗಿಕ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ.

6.56 ಕಿ.ಮೀ. ಉದ್ದದ ಮಾರ್ಗದಲ್ಲಿ 14 ದಿನಗಳಿಂದ ನಡೆಸಲಾದ ಥರ್ಡ್ ರೇಲ್ (ಹಳಿ) ಪರೀಕ್ಷಾ ಕಾರ್ಯ ಪೂರ್ಣ ಗೊಂಡಿದ್ದು, ಒಂದೂವರೆ ತಿಂಗಳವರೆಗೆ ಪ್ರಾಯೋಗಿಕ ವಾಗಿ ರೈಲು ಸಂಚಾರನಡೆಯಲಿದೆ. ಈ ಸಂದರ್ಭದಲ್ಲಿ ಮಾರ್ಗದ ತಿರುವುಗಳಲ್ಲಿ ಮತ್ತು ಉಳಿದೆಡೆ ರೈಲಿನ ಸರಾಸರಿ ವೇಗ ಎಷ್ಟಿರಬೇಕು ಎಂಬುದನ್ನು ಪರೀಕ್ಷಿಸಲಾಗುತ್ತದೆ. ಅಕ್ಟೋಬರ್ ಮೊದಲ ವಾರ ರೈಲ್ವೆ ಸುರಕ್ಷತಾ ಪ್ರಾಧಿಕಾರದ ಆಯುಕ್ತರು ರೈಲು ಮಾರ್ಗ ಮತ್ತು ರೈಲಿನ ವೇಗ ಪರೀಕ್ಷೆಗೊಳಪಡಿಸಿ ಕಾರ್ಯಾಚರಣೆಗೆ ಅನುಮತಿ ನೀಡಲಿದ್ದಾರೆ.

ಈ ಹಿಂದೆ ಆ. 15ರಿಂದ ಈ ಮಾರ್ಗದಲ್ಲಿ ಮೆಟ್ರೋ ರೈಲು ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ತಿಳಿಸಲಾಗಿತ್ತು. ಇದೀಗ ನ. 1ರಂದು ವಾಣಿಜ್ಯ ಸಂಚಾರ ಆರಂಭಿಸಲು ಬಿಎಂಆರ್​ಸಿಎಲ್ ನಿರ್ಧರಿಸಿದೆ.

ಐದು ನಿಲ್ದಾಣಗಳು

ಮಾರ್ಗದಲ್ಲಿ 5 ನಿಲ್ದಾಣಗಳಿವೆ. ಕೋಣನ ಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರದಲ್ಲಿ ನಿಲ್ದಾಣಗಳನ್ನು ನಿರ್ವಿುಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net