

ಹೊಸನಗರ: ಯಡೂರಿನ ಮಾಣಿ ಜಲಾಶಯದ ನೀರಿನ ಮಟ್ಟ ಏರುತ್ತಿದ್ದು, ಯಾವುದೇ ಕ್ಷಣದಲ್ಲಿ ನೀರು ಹೊರಬಿಡುವ ಸಾಧ್ಯತೆ ಇದೆ. ಸುರಕ್ಷತೆ ದೃಷ್ಟಿಯಿಂದ ಅಂತಿಮ ಮುನ್ನೆಚ್ಚರಿಕೆ ನೀಡಲಾಗಿದೆ.
ಯಡೂರಿನ ಮಾಣಿಯಲ್ಲಿ 594.36 ಮೀ. ಗರಿಷ್ಠ ಮಟ್ಟ ಇದ್ದು, ಜಲಾಶಯದಲ್ಲಿ ನೀರಿನ ಮಟ್ಟ ಗುರುವಾರ 592 ಮೀ. ತಲುಪಿದೆ. 2,642 ಕ್ಯೂಸೆಕ್ ಒಳಹರಿವು ಇದೆ. ಮಳೆ ಇರುವುದರಿಂದ ನೀರಿನ ಹರಿವು ಹೆಚ್ಚಾದಲ್ಲಿ ಮಾಣಿ ಜಲಾಶಯದಿಂದ ನೀರು ಹೊರಬಿಡಲಾಗುವುದು ಎಂದು ತಿಳಿಸಲಾಗಿದೆ.
ಅಣೆಕಟ್ಟೆಯ ಕೆಳದಂಡೆಯಲ್ಲಿ, ವಾರಾಹಿ, ಹಾಲಾಡಿ ನದಿಪಾತ್ರದ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರು ಜತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಮಾಸ್ತಿಕಟ್ಟೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ (ಕಾಮಗಾರಿ) ಸೂಚಿಸಿದ್ದಾರೆ.