ಉತ್ತರಾಖಂಡದ 51 ದೇವಾಲಯ ಸರ್ಕಾರದಿಂದ ಮುಕ್ತ; ನಿರ್ಧಾರ ಪ್ರಕಟಿಸಿದ ಸಿಎಂ ತೀರಥ್ ರಾವತ್

Temple
Published on

ಡೆಹ್ರಾಡೂನ್: ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಸೇರಿ 51 ಪ್ರಮುಖ ದೇವಾಲಯಗಳನ್ನು ಉತ್ತರಾಖಂಡ ಸರ್ಕಾರ ತನ್ನ ಸುಪರ್ದಿನಿಂದ ಮುಕ್ತಗೊಳಿಸಿದೆ. ಚಾರ್​ಧಾಮ್ ದೇವಸ್ಥಾನಂ ಮಂಡಳಿ ರಚನೆ ಬಗ್ಗೆಯೂ ಮರುಪರಿಶೀಲನೆ ನಡೆಯಲಿದೆ ಎಂದು ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.

ವಿಶ್ವ ಹಿಂದು ಪರಿಷ್ (ವಿಎಚ್​ಪಿ) ಕೇಂದ್ರೀಯ ಮಾರ್ಗದರ್ಶಕ ಮಂಡಲದ ಜತೆ ಹರಿದ್ವಾರದಲ್ಲಿ ಶುಕ್ರವಾರ ಸಭೆ ನಡೆಸಿದ ನಂತರ ತೀರಥ್ ಸಿಂಗ್ ರಾವತ್ 51 ದೇವಾಲಯಗಳನ್ನು ಸರ್ಕಾರದ ಸುಪರ್ದಿನಿಂದ ಕೈಬಿಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಚಾರ್​ಧಾಮ್ ದೇವಸ್ಥಾನ ನಿರ್ವಹಣಾ ಮಸೂದೆಯನ್ನು ಉತ್ತರಾಖಂಡ ವಿಧಾನಸಭೆ ಕಳೆದ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿತ್ತು. ಇದರ ಅನ್ವಯ ಚಾರ್​ಧಾಮ್ ಮಂಡಳಿ ರಚನೆ ಆಗಲಿದ್ದು, ಧಾರ್ವಿುಕ ಸ್ಥಳಗಳ ಆಡಳಿತವು ವೃತ್ತಿಪರವಾಗಲಿದೆ ಎಂದು ಹಿಂದಿನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡಿದ್ದರು. ಈ ಮಂಡಳಿಗೆ ಮುಖ್ಯಮಂತ್ರಿಯೇ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಹಿರಿಯ ಐಎಎಸ್ ಅಧಿಕಾರಿಯನ್ನು ಮಂಡಳಿಯ ಸಿಇಒ ಆಗಿ ನೇಮಿಸಲಾಗುತ್ತದೆ. ತಪ್ಪೆಸಗುವ ಅರ್ಚಕರನ್ನು ಸೇವೆಯಿಂದ ವಜಾ ಮಾಡಬಹುದು ಎಂಬ ಪ್ರಸ್ತಾಪಗಳಿದ್ದ ಈ ಮಸೂದೆಗೆ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಸಹಿ ಮಾಡಿದ ನಂತರ ಕಾಯ್ದೆ ಆಗಿತ್ತು. ಆದರೆ, ಪ್ರಮುಖ ದೇವಾಲಯಗಳ ಆಡಳಿತವನ್ನು ಸರ್ಕಾರವೇ ವಹಿಸಿಕೊಳ್ಳುವುದನ್ನು ವಿರೋಧಿಸಿ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಗಂಗೋತ್ರಿಯ ಮುಖ್ಯ ಅರ್ಚಕ ವಿಶ್ವ ಹಿಂದು ಪರಿಷದ್ ಮತ್ತು ಆರ್​ಎಸ್​ಎಸ್ ಮುಖಂಡನ್ನು ಭೇಟಿಯಾಗಿ ಈ ಮಸೂದೆಯನ್ನು ತೀವ್ರವಾಗಿ ಟೀಕಿಸಿದ್ದರು. ತಲೆತಲಾಂತರಗಳಿಂದ ದೇವಾಲಯಗಳನ್ನು ಅರ್ಚಕರ ಮನೆತನದವರು ನಡೆಸಿಕೊಂಡು ಬರುತ್ತಿದ್ದಾರೆ. ದೇವಾಲಯದ ಆಡಳಿತವನ್ನು ಈ ಕುಟುಂಬಗಳಿಗೆ ಬಿಟ್ಟಕೊಡಬೇಕು ಎಂದು ಆಗ್ರಹಿಸಿದ್ದರು.

51 ದೇಗುಲಗಳ ಆಡಳಿತವನ್ನು ಅವುಗಳಿಗೇ ಬಿಡುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಶ್ಲಾಘಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಸ್ಪಂದಿಸುವ ಸರ್ಕಾರದ ಲಕ್ಷಣ ಎಂದಿದ್ದಾರೆ. ವಿಎಚ್​ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ವಿಎಚ್​ಪಿ ಮಾರ್ಗದರ್ಶಕ ಮಂಡಲದ ಮೂರು ನಿರ್ಣಯ

  • ದೇವಾಲಯಗಳ ಮೇಲೆ ರಾಜ್ಯ ಸರ್ಕಾರಗಳ ಹಿಡಿತ ತಪ್ಪಬೇಕು.
  • ರಾಮಸೇತುವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
  • ಯಾವ ರಾಜ್ಯಗಳಲ್ಲಿ ಮತಾಂತರ ತಡೆ ಕಾನೂನು ಇಲ್ಲವೋ ಅಂತಹ ರಾಜ್ಯಗಳು ಕೂಡಲೇ ಇದನ್ನು ರಚಿಸಬೇಕು.
ಉತ್ತರಾಖಂಡದಲ್ಲಿ ಪ್ರಮುಖ 51 ದೇವಾಲಯಗಳನ್ನು ರಾಜ್ಯ ಸರ್ಕಾರದ ನಿಯಂತ್ರಣದಿಂದ ಹೊರಗಿರಿಸಿರುವುದು ಸ್ವಾಗತಾರ್ಹ ಮತ್ತು ಮಹತ್ವದ ನಿರ್ಧಾರ. ಹಿಂದುಗಳ ಪೂಜಾ ಸ್ಥಳಗಳು ಸಮುದಾಯದ ಸುಪರ್ದಿನಲ್ಲಿ, ಭಕ್ತರ ನಿರ್ವಹಣೆಯಲ್ಲಿ ಇದ್ದರೆ ದೇವಾಲಯ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯ. ದೇಶದ ಉಳಿದ ರಾಜ್ಯಗಳೂ ಇದೇ ಮಾದರಿಯಲ್ಲಿ ಮುನ್ನಡೆಯಬೇಕು. ಉತ್ತರಾಖಂಡದಂತೆ ಬೇರೆ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಸರಳವಾಗಿ ಆಗದಿರಬಹುದು. ಆದರೆ, ಸರ್ಕಾರಗಳಿಗೆ ಮನಸ್ಸಿದ್ದರೆ ಪರಿಹಾರೋಪಾಯ ಕಷ್ಟವಲ್ಲ. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿಯಬೇಕು. | ಸದ್ಗುರು ಈಶ ಫೌಂಡೇಷನ್ ಸಂಸ್ಥಾಪಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net