

| ಹರೀಶ್ ಬೇಲೂರು ಬೆಂಗಳೂರು
ಗ್ಯಾರಂಟಿ ಯೋಜನೆಗಳ ಹೊರೆ, ಭೀಕರ ಬರಗಾಲಕ್ಕೆ ಪರಿಹಾರ ಕಂಡುಕೊಳ್ಳುವ ಬರೆಯಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರಕ್ಕೆ ಈಗ ನಿವೃತ್ತ ಅಧಿಕಾರಿಗಳು, ನೌಕರರು ಭಾರವಾಗಿದ್ದಾರೆ. ಸರ್ಕಾರ ಆದೇಶ ಹೊರಡಿಸಿ ಎರಡೂವರೆ ತಿಂಗಳು ಕಳೆದರೂ ಸಚಿವಾಲಯ ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ 500ಕ್ಕೂ ಅಧಿಕ ನಿವೃತ್ತ ಅಧಿಕಾರಿಗಳು, ನೌಕರರು ಹುದ್ದೆ ಬಿಟ್ಟು ಕೊಡದೆ ಕುರ್ಚಿಗೆ ಅಂಟಿ ಕುಳಿತುಬಿಟ್ಟಿದ್ದಾರೆ. ಸರ್ಕಾರಿ ಆದೇಶ ಪಾಲಿಸಬೇಕಾದ ಕೆಲ ಸಚಿವರೇ ನಿವೃತ್ತರ ಸೇವೆ ಮುಂದುವರಿಸಲು ಟಿಪ್ಪಣಿ ಹೊರಡಿಸುತ್ತಿದ್ದಾರೆ. ಈ ನಡುವೆ ಸರ್ಕಾರಕ್ಕೆ ಹೆಚ್ಚು ಆದಾಯ ತರುವ ಇಲಾಖೆಗಳು ಹಾಗೂ ಸರ್ಕಾರದಿಂದ ಅತಿ ಹೆಚ್ಚು ಅನುದಾನ ಸಿಗುವ ಇಲಾಖೆಗಳಲ್ಲಿರುವ ವಿವಿಧ ವೃಂದದ ಲಾಭದಾಯಕ ಹುದ್ದೆಗಳಲ್ಲೇ ಹೆಚ್ಚು ನಿವೃತ್ತರು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸೇರಿ ಸರ್ಕಾರ ಹಲವು ಇಲಾಖೆಗಳಲ್ಲಿ ಹಾಗೂ ಸಚಿವಾಲಯದಲ್ಲಿ ನಿವೃತ್ತಿ ಹೊಂದಿದ ಅಧಿಕಾರಿ, ನೌಕರರನ್ನು ಅನಗತ್ಯ ಹುದ್ದೆ ಸೃಜಿಸಿ ಸಮಾಲೋಚಕರು, ವಿಶೇಷ ಸಂಪನ್ಮೂಲ ವ್ಯಕ್ತಿಗಳೆಂದು ಗ್ರೂಪ್ ‘ಎ’, ‘ಬಿ’ವೃಂದದ ಲಾಭದಾಯಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.
ಇವರಿಗೆ ವೇತನ, ವಾಹನ ಸೇರಿ ಇತರ ಸೌಲಭ್ಯ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಪ್ರತಿವರ್ಷ ನೂರಾರು ಕೋಟಿ ರೂ. ಹೊರೆಯಾಗುತ್ತಿದೆ.
ಕ್ರಮಕೈಗೊಳ್ಳುವ ಅಧಿಕಾರವೂ ಇಲ್ಲ: ಸರ್ಕಾರ ಸ್ವಾಮ್ಯದ ಸಂಸ್ಥೆಗಳ ಬೈಲಾ ಪ್ರಕಾರ ಹಾಗೂ ಕಾರ್ವಿುಕ ಕಾಯ್ದೆ ಅನ್ವಯ 60 ವರ್ಷ ತುಂಬಿದ ಬಳಿಕ ನಿವೃತ್ತರನ್ನು ಸರ್ಕಾರಿ ಹುದ್ದೆಗೆ ನೇಮಿಸಿಕೊಳ್ಳುವಂತಿಲ್ಲ. ನೇಮಿಸಿಕೊಂಡರೂ ಸರ್ಕಾರದಿಂದ ಅನುಮತಿ ಪಡೆದು ಸಂಸ್ಥೆಯ ಆಡಳಿತ ಪರಿಷತ್ತು ಸಭೆಯಲ್ಲಿ ಮಂಡಿಸಿಬೇಕು. ಆದರೆ, ಈ ನಿಯಮ ಪಾಲಿಸದೆ ಕೆಲ ನಿವೃತ್ತರಿಗೆ ಟೆಂಡರ್ ಸೇರಿ ಇತರ ಪ್ರಮುಖ ಕಡತ ವಿಲೇವಾರಿ ಜವಾಬ್ದಾರಿ ಹಂಚಲಾಗಿದೆ. ಕೆಲ ನಿವೃತ್ತ ನೌಕರರಿಗೆ ಕಚೇರಿ ಅಧೀಕ್ಷಕರ ಹುದ್ದೆ ನೀಡಲಾಗಿದೆ. ಆಡಳಿತ ಕಾರ್ಯದಲ್ಲಿ ಏನಾದರೂ ತಪು್ಪ ಮಾಡಿದರೂ ಹೊಣೆಗಾರಿಕೆಯಿಂದ ಸುಲಭವಾಗಿ ನುಣುಚಿಕೊಳ್ಳುವುದರಿಂದ ಇವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಸಂಗ ಎದುರಾಗದಂತೆ ನೋಡಿಕೊಳ್ಳುತ್ತಾರೆ ಎಂಬ ಆರೋಪವಿದೆ.
ನಿಯಮಗಳಿಗಿಲ್ಲ ಬೆಲೆ: ಸರ್ಕಾರಿ ಹುದ್ದೆಯಿಂದ ನಿವೃತ್ತರಾದವರನ್ನು ಮರುನೇಮಕ ಮಾಡಬಾರದು. ಮರುನೇಮಕಗೊಂಡವರ ಸೇವೆ ಪರಿಶೀಲಿಸಿ ಮುಕ್ತಾಯಗೊಳಿಸಬೇಕು.
ವೃಂದ ಮತ್ತು ನೇಮಕಾತಿ ನಿಯಮದಂತೆ ಹೊಸ ಸಿಬ್ಬಂದಿ ನೇಮಿಸಬೇಕೆಂದು ಸರ್ಕಾರ ಸ್ಪಷ್ಟವಾಗಿ ಸುತ್ತೋಲೆ ಹೊರಡಿಸಿದೆ. ಆದರೂ, ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ನಿವೃತ್ತರನ್ನು ನೇಮಿಸಿಕೊಳ್ಳಲಾಗುತ್ತಿದೆ. ಜತೆಗೆ ನಿವೃತ್ತರು ಆಡಳಿತಾತ್ಮಕ ಕೆಲಸಗಳಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ.
ಕೆಐಎಡಿಬಿಯಲ್ಲಿ 33 ನಿವೃತ್ತರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) 33 ನಿವೃತ್ತ ಅಧಿಕಾರಿಗಳು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಥಿಕ ಸಲಹೆಗಾರರು, ಅಧೀಕ್ಷಕ ಅಭಿಯಂತರ, ತಾಂತ್ರಿಕ ಸಹಾಯಕ, ಹಿರಿಯ ಸಹಾಯಕ, ಸಹಾಯಕ ಕಾರ್ಯದರ್ಶಿ, ಅಧೀಕ್ಷಕರು, ರೆಕಾರ್ಡ್ ಕೀಪರ್, ಕಿರಿಯ, ಹಿರಿಯ ಸಹಾಯಕ, ಕಾನೂನು ಸಲಹೆಗಾರರು, ಅಟೆಂಡರ್, ಸಹಾಯಕ ಅಭಿಯಂತರರು, ವ್ಯವಸ್ಥಾಪಕಿ, ತಹಶೀಲ್ದಾರ್, ಶಿರಸ್ತೇದಾರ್, ಭೂಮಾಪಕರು, ವ್ಯವಸ್ಥಾಪಕ ಹುದ್ದೆಗಳಲ್ಲಿ ಕುಳಿತು ಕಾರ್ಯಭಾರ ನಡೆಸುತ್ತಿದ್ದಾರೆ. ಲೋಕೋಪಯೋಗಿ, ಜಲಸಂಪನ್ಮೂಲ,ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಆರೋಗ್ಯ, ವೈದ್ಯಕೀಯ ಕಾಲೇಜು, ಸರ್ಕಾರಿ ಆಸ್ಪತ್ರೆ, ಗ್ರಾಮೀಣಾಭಿಭಿವೃದ್ಧಿ ಮತ್ತು ಪಂಚಾಯತ್ ರಾಜ್, ಇಂಧನ, ಶಿಕ್ಷಣ, ನಿಗಮ ಮಂಡಳಿಗಳು ಸೇರಿ ಸರ್ಕಾರ ವಿವಿಧ ಇಲಾಖೆಗಳ ಹಲವು ಹುದ್ದೆಗಳಿಗೆ ಅಕ್ರಮವಾಗಿ ನಿವೃತ್ತರನ್ನು ನೇಮಿಸಿಕೊಳ್ಳಲಾಗಿದೆ.