ಹುಷಾರು ದೂರವಿಲ್ಲ 50000; ಜುಲೈ,ಆಗಸ್ಟ್​ನಲ್ಲಿ ಸೋಂಕು ಗಂಭೀರ: ಇನ್ನೂ 6 ತಿಂಗಳಿಲ್ಲ ಪರಿಹಾರ

page 1 1
Published on

ಬೆಂಗಳೂರು: ಕರೊನಾ ಅಟ್ಟಹಾಸ ಮಟ್ಟಹಾಕಲು ಸರ್ಕಾರ ಏನೆಲ್ಲಾ ಭಗೀರಥಪ್ರಯತ್ನ ನಡೆಸುತ್ತಿದ್ದರೂ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 50 ಸಾವಿರ ಗಡಿ ದಾಟುವುದು ನಿಶ್ಚಿತ ಎಂದು ತಜ್ಞರು ಗಂಭೀರ ಎಚ್ಚರಿಕೆ ರವಾನಿಸಿದ್ದಾರೆ. ಮತ್ತೊಂದೆಡೆ ಇನ್ನೂ 6 ತಿಂಗಳು ಕರಾಳ ಸೋಂಕು ರಾಜ್ಯದ ಜನರನ್ನು ಕಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಮಾನಸಿಕವಾಗಿ ಸಿದ್ಧರಾಗುವಂತೆ ಜನರನ್ನು ಎಚ್ಚರಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿದೆ. ಜನಪ್ರತಿನಿಧಿಗಳೂ ಒಳಗೊಂಡಂತೆ ಬಹುತೇಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೀದಿಗಿಳಿದ ಪರಿಣಾಮ ರಾಜ್ಯದಲ್ಲಿ ಸೋಂಕು ಸಮುದಾಯಕ್ಕೆ ಆವರಿಸಿದೆ ಎಂಬುದನ್ನು ಏರುತ್ತಿರುವ ಪ್ರಕರಣಗಳೇ ಸಾಕ್ಷೀಕರಿಸಿವೆ. ಈಗಲೂ ಜನರು ಎಚ್ಚೆತ್ತುಕೊಳ್ಳದಿದ್ದರೆ ಕರೊನಾ ಪ್ರತಿ ಮನೆ ಬಾಗಿಲು ತಟ್ಟಲಿದೆ. ಹೀಗಾಗಿ ಜನರೇ ಸ್ವಯಂ ನಿಯಂತ್ರಣ ಹೇರಿಕೊಂಡು ನಿಯಮ ಪಾಲಿಸದಿದ್ದಲ್ಲಿ ರಾಜ್ಯ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತಿಂಗಳಲ್ಲಿ 10 ಸಾವಿರ ಕೇಸ್: ಮಾ. 9ರಂದು ರಾಜ್ಯದಲ್ಲಿ ಮೊದಲ ಪ್ರಕರಣ ವರದಿಯಾಗಿ, ಮೇ 15ಕ್ಕೆ ಒಂದು ಸಾವಿರ ಗಡಿ ದಾಟಿತ್ತು. ಮೇ. 24ಕ್ಕೆ ಪ್ರಕರಣಗಳು ದುಪ್ಪಟ್ಟಾಗಿ 2 ಸಾವಿರ ದಾಟಿತು. ಅದಾದ ಒಂದೇ ತಿಂಗಳಲ್ಲಿ 10 ಸಾವಿರ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 13 ಸಾವಿರ ಗಡಿ ದಾಟಿದೆ.

ನಿಯಮ ಪಾಲನೆ ನಿರ್ಲಕ್ಷ್ಯ: ಲಾಕ್​ಡೌನ್ ತೆರವಿನೊಂದಿಗೆ ಆರಂಭಗೊಂಡ ಅಂಗಡಿ ಮುಂಗಟ್ಟುಗಳು, ಮದ್ಯದಂಗಡಿಗಳು, ಕೈಗಾರಿಕೆಗಳು ಹಾಗೂ ಕಚೇರಿಗಳು, ಹೋಟೆಲ್​ಗಳು, ಮಾಲ್ ಗಳು, ಸಮೂಹ ಸಾರಿಗೆಯಲ್ಲಿ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡದೇ ಇರುವುದೂ ಇಂದಿನ ಸ್ಥಿತಿಗೆ ಕಾರಣವಾಗಿದೆ.

ಮಾಹಿತಿ ನೀಡುವಂತಿಲ್ಲ: ಖಾಸಗಿ ಪ್ರಯೋಗಾಲಯಗಳು ಕರೊನಾ ಪರೀಕ್ಷೆ ನಡೆಸಿ ಆ ವರದಿಯನ್ನು ರೋಗಿಗೆ ತಿಳಿಸುವ ಮೊದಲು ಐಸಿಎಂಆರ್ ಮತ್ತು ಬಿಬಿಎಂಪಿ ಪೋರ್ಟಲ್​ಗೆ ಅಪ್​ಡೇಟ್ ಮಾಡಬೇಕು. ನಂತರ ಬಿಬಿಎಂಪಿಯ ಅಧಿಕಾರಿಗಳು ರೋಗಿಗೆ ಮಾಹಿತಿ ನೀಡಿ ಅವರನ್ನು ಆಸ್ಪತ್ರೆಗೆ ಸೇರಿಕೊಳ್ಳಬೇಕೆ?, ಕರೊನಾ ಕೇರ್ ಸೆಂಟರ್​ಗೆ ಹೋಗಬೇಕೆ ಎಂಬುದನ್ನು ನಿರ್ಧರಿಸುತ್ತಾರೆ. ಈ ಸಂಬಂಧ ಆದೇಶವನ್ನು ಹೊರಡಿಸಲಾಗಿದೆ. ಇನ್ನು ಮುಂದೆ ಖಾಸಗಿ ಪ್ರಯೋಗಾಲಯಗಳು ರೋಗಿಗೆ ರೋಗದ ಬಗ್ಗೆ ತಿಳಿಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜು.7ರ ವರೆಗೆ ಕಾಯಿರಿ: ಮತ್ತೆ ಲಾಕ್ ಡೌನ್ ಜಾರಿ ಕುರಿತ ಪ್ರಶ್ನೆಗೆ , ಜು.7ರ ವರೆಗೆ ಕಾಯಿರಿ ಎಂಬ ಸಚಿವ ಅಶೋಕ್ ಸೂಚ್ಯ ಹೇಳಿಕೆ ಮತ್ತೆ ಬೆಂಗಳೂರಿನಲ್ಲಿ ಲಾಕ್​ಡೌನ್ ಜಾರಿಯಾಗುವುದೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಜು.7ರ ನಂತರ ಮುಖ್ಯಮಂತ್ರಿಗಳು ಹಲವಾರು ಬದಲಾವಣೆಗಳನ್ನು ತೆಗೆದುಕೊಳ್ಳಲಿದ್ದಾರೆ. ಮತ್ತಷ್ಟು ಕಠಿಣ ಕ್ರಮಗಳನ್ನು ಪ್ರಕಟಿಸುತ್ತೇವೆ ಎಂದರು.

ಅಪಾಯದಲ್ಲಿ 64.16 ಲಕ್ಷ ಮಂದಿ: ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ನಡೆಸಿರುವ ಮನೆ ಮನೆ ಸಮೀಕ್ಷೆಯಲ್ಲಿ ರಾಜ್ಯದ 64.16 ಲಕ್ಷ ಮಂದಿ ಕರೊನಾದಿಂದ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುವುದಾಗಿ ತಿಳಿದುಬಂದಿದೆ. ರಾಜ್ಯದಲ್ಲಿ ನಾನಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 16.14 ಲಕ್ಷ ವೃದ್ಧರು, 61.50 ಲಕ್ಷ ಹಿರಿಯ ನಾಗರಿಕರು, 4.89 ಲಕ್ಷ ಗರ್ಭಿಣಿಯರು, 1.80ಲಕ್ಷ ಶೀತ, ಜ್ವರ, ಕೆಮ್ಮಿನಿಂದ ಬಳಲುತ್ತಿರುವವರು, 29,705 ಮಂದಿ ಐಎಲ್​ಐ ಸೋಂಕು ಲಕ್ಷಣ ಹೊಂದಿದವರಿದ್ದಾರೆಂದು ಸಮೀಕ್ಷೆ ವೇಳೆ ತಿಳಿದುಬಂದಿದೆ. ಇವರೆಲ್ಲರೂ ಎಚ್ಚರ ವಹಿಸದಿದ್ದರೆ ಸೋಂಕಿಗೆ ಒಳಗಾಗುವ ಅಪಾಯವಿದೆ.

ಕರ್ನಾಟಕಕ್ಕೆ 11ನೇ ಸ್ಥಾನ: ಜೂನ್ ಆರಂಭದಿಂದ ಕರ್ನಾಟಕದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಒಟ್ಟಾರೆ ಪ್ರಕರಣಗಳಲ್ಲಿ ಜೂ.1ರಿಂದ 29ರವರೆಗೆ ಶೇ. 81 (9,782) ವರದಿಯಾಗಿದೆ. ಈ ಅವಧಿಯಲ್ಲಿ ರಾಜ್ಯವು 155 ಸಾವುಗಳನ್ನು ಕಂಡಿದ್ದು, ಮೃತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 88 ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಆ ಮೂಲಕ ಸೋಂಕಿತರ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 11ನೇ ಸ್ಥಾನಕ್ಕೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net