50 ಲಕ್ಷ ರೂ. ಪರಿಹಾರ ನೀಡಿ

9-6841e08bdb2d2
Published on

ಬೆಂಗಳೂರು: ಕಾಲ್ತುಳಿತ ಪ್ರಕರಣದ ಹೊಣೆ ಹೊತ್ತು ಡಿಸಿಎಂ ಮತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಮತ್ತು ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ರಾಜ್ಯ ಬಿಜೆಪಿ ಒತ್ತಾಯಿಸಿದೆ. ಗುರುವಾರ ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಲ್ತುಳಿತ ಅನಾಹುತದ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಹೊರಬೇಕು. ತೆಲಂಗಾಣದಲ್ಲಿ ನಟ ಅಲ್ಲು ಅರ್ಜುನ್ ಸಿನಿಮಾ ಬಿಡುಗಡೆ ವೇಳೆ ಕಾಲ್ತುಳಿತದಿಂದ ಸಾವು ನೋವಾಗಿತ್ತು. ಅಲ್ಲಿಯೂ ಕಾಂಗ್ರೆಸ್ ಸರ್ಕಾರ ಇತ್ತು. ಅಲ್ಲು ಅರ್ಜುನ್ ಬಂಧನಕ್ಕೆ ಒಳಗಾಗಿದ್ದರು. ಮ್ಯಾಜಿಸ್ಟ್ರೇಟ್​ರಿಂದ ತನಿಖೆ ನಡೆದರೆ ಅಪರಾಧಿ ಸ್ಥಾನದಲ್ಲಿ ಇರುವ ಮುಖ್ಯಮಂತ್ರಿ, ಮಂತ್ರಿಮಂಡಲದ ಸದಸ್ಯರನ್ನು ತನಿಖೆಗೆ ಒಳಪಡಿಸಲು ಸಾಧ್ಯವಿಲ್ಲ. ಹೈಕೋರ್ಟ್ ಮುಖ್ಯನ್ಯಾಯಾಧೀಶರ ಪೀಠದಲ್ಲಿ ಪಿಐಎಲ್ ದಾಖಲಾಗಿದೆ. ಹೈಕೋರ್ಟ್ ಜಡ್ಜ್ ಸುಪರ್ದಿಯಲ್ಲಿ ತನಿಖೆ ನಡೆಸಲು ಎಸ್​ಐಟಿ ರಚಿಸಬೇಕು. ಹೈಕೋರ್ಟ್​ಗೆ ವರದಿ ಸಲ್ಲಿಕೆಯಾಗಬೇಕು. ಲೋಪ ಎಸಗಿದವರಿಗೆ ಶಿಕ್ಷೆ ಕೊಡಿಸುವ ಮೂಲಕ ಸಾವುಗಳಿಗೆ ನ್ಯಾಯ ನೀಡಬೇಕಾಗಿದೆ ಎಂದು ಹೇಳಿದರು. ಕೇರಳದಲ್ಲಿ ಆನೆ ತುಳಿತದಿಂದ ಸಾವಾದರೆ ರಾಜ್ಯದಿಂದ 25 ಲಕ್ಷ ರೂ. ಪರಿಹಾರ ಘೊಷಿಸಿದ್ದರು. ರಾಜ್ಯದಲ್ಲಿ ಕೇವಲ 10 ಲಕ್ಷ ರೂ. ಪರಿಹಾರ ಕೊಡುವುದು ಎಷ್ಟು ಸರಿ? ಈ ಕೂಡಲೇ ತಲಾ 50 ಲಕ್ಷ ರೂ. ಪರಿಹಾರ ಕೊಡಬೇಕು. ಲಂಡನ್, ದುಬೈನಲ್ಲಿ ಇರುವ ಆರ್​ಸಿಬಿ ಮಾಲೀಕರು ಕೂಡ ಹೆಚ್ಚಿನ ಪರಿಹಾರ ಕೊಡಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದರು.

ಕಪ್ಪು ನಮ್ದೇ, ತಪ್ಪು ಯಾರದ್ದು ..?

ಇದು ಕ್ರಿಕೆಟ್ ಅಸೋಸಿಯೇಶನ್ ಕಾರ್ಯಕ್ರಮ ಎಂದು ಹೇಳಿ ಸಿಎಂ ಸಿದ್ದರಾಮಯ್ಯ, ತಮ್ಮ ತಪ್ಪನ್ನು ಮುಚ್ಚಿಹಾಕಿ ನುಣುಚಿಕೊಳ್ಳಲು ನೋಡಿದ್ದಾರೆ. ಸಿಎಂ ಮತ್ತು ಡಿಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದರು. ಕಪ್ಪು ನಮ್ದೇ ಎಂದು ಎಲ್ಲರೂ ಹೇಳುತ್ತಿರುವಾಗ, ತಪ್ಪು ಯಾರದ್ದು ಎಂದು ಸರ್ಕಾರವನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕಪು್ಪ ಎತ್ತಿ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟವರು ಸತ್ತ ಅಮಾಯಕರ ಶವಕ್ಕೆ ಹೆಗಲು ಕೊಡಲು ಬರಲಿಲ್ಲ ಎಂದು ಅಶೋಕ್ ವ್ಯಂಗ್ಯವಾಡಿದರು.

ಕಾಲ್ತುಳಿತದಿಂದ ಸಾವು ನೋವು ಸಂಭವಿಸಿರುವ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಆಗುತ್ತಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್, ಐಪಿಎಲ್ ಟ್ರೋಫಿಗೆ ಮುತ್ತಿಕ್ಕುತ್ತಿದ್ದರು. ವಿಧಾನಸೌಧದಲ್ಲಿ ಆಡಳಿತ ಪಕ್ಷದವರ ಸೆಲ್ಪಿಗಳ ಭರಾಟೆ ಮುಂದುವರಿದಿತ್ತು. ರಾಜ್ಯ ಸರ್ಕಾರ ಇಂಥ ಅಮಾನವೀಯ ನಡವಳಿಕೆ ಖಂಡನಾರ್ಹ. | ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಕಾಲ್ತುಳಿದ ಸಂದರ್ಭದಲ್ಲಿ ಮಧ್ಯಾಹ್ನ 3.45 ಗಂಟೆಗೆ ಮೊದಲ ಸಾವಾಗಿತ್ತು. ಕ್ರಿಕೆಟ್ ಆಟಗಾರರು ಸಂಜೆ 5 ಗಂಟೆಗೆ ಆಗಮಿಸಿದರು. ಸನ್ಮಾನ ಮುಗಿಯುವಷ್ಟರಲ್ಲಿ 7 ರಿಂದ 8 ಜನ ಮೃತಪಟ್ಟಿರುವ ಬಗ್ಗೆ ಮಾಹಿತಿ ಹರಿದಾಡಿತು. ಇಷ್ಟೆಲ್ಲ ಆದರೂ ಜನಾರ್ದನ ಹೋಟೆಲಿಗೆ ತೆರಳಿ ಸಿಎಂ ದೋಸೆ ತಿಂದಿದ್ದಾರೆ. ಸೂತಕದ ಮನೆಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಯಾರೆಂಬಂತಾಗಿದೆ? | ಛಲವಾದಿ ನಾರಾಯಣಸ್ವಾಮಿ, ಪರಿಷತ್ ವಿಪಕ್ಷ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net