ಪ್ರೇಮ ವಿವಾಹ ಮುಚ್ಚಿಟ್ಟು ಯುವತಿ ಆತ್ಮಹತ್ಯೆಗೆ ಕಾರಣನಾದ ಡ್ರೈವರ್‌ಗೆ 5 ವರ್ಷ ಜೈಲು

court
Published on

ಬೆಂಗಳೂರು: ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿ ಸಂಸಾರ ನಡೆಸದೆ ಯುವತಿಯನ್ನು ದೂರ ಮಾಡಿ ಆಕೆಯ ಆತ್ಮಹತ್ಯೆಗೆ ಕಾರಣನಾದ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ 71ನೇ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಪೀಣ್ಯ ನಿವಾಸಿ ಪ್ರದೀಪ್ ಕುಮಾರ್ ಅಪರಾಧಿ. ಬಿಎಂಟಿಸಿ ಕಂಡಕ್ಟರ್ ಸುಧಾ ಎಂಬಾಕೆ 2013ರ ನ.1ರಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ, ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಬಾಲಚಂದ್ರ ಭಟ್ ಅವರು ಆತ್ಮಹತ್ಯೆಗೆ ಪ್ರಚೋಧನೆ ನೀಡಿದ ಎಂದು ಪ್ರದೀಪ್‌ನನ್ನು ಅಪರಾಧಿ ಎಂದು ೋಷಣೆ ಮಾಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಂಗ ಬಂಧನಕ್ಕೆ ಸೂಚಿಸಿದರು.

ಬಿಎಂಟಿಸಿ 7ನೇ ಘಟಕದಲ್ಲಿ ಬಸ್ ಕಂಡಕ್ಟರ್ ಆಗಿ ಸುಧಾ, ಕೆಲಸ ಮಾಡಿಕೊಂಡು ಟಿ. ದಾಸರಹಳ್ಳಿಯಲ್ಲಿ ಅಕ್ಕನ ಮನೆಯಲ್ಲಿ ನೆಲೆಸಿದ್ದಳು. ಇದೇ ಡಿಪೋದಲ್ಲಿ ಚಾಲಕನಾಗಿದ್ದ ಪ್ರದೀಪ್, ಪ್ರೀತಿಸುವ ನಾಟಕವಾಗಿ ವಾರದ ರಜೆ ಪಡೆದು ಸುಧಾಳನ್ನು ಕುಕ್ಕೆ ಸುಬ್ರಮಣ್ಯಕ್ಕೆ ಕರೆದೊಯ್ದು ಸಮೀಪದ ಅಭಯ ಗಣಪತಿ ದೇವಸ್ಥಾನದಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಂಡು ಮದುವೆ ಆಗಿ ಫೋಟೋ ತೆಗೆಸಿಕೊಂಡಿದ್ದರು. ಅಲ್ಲಿಂದ ಬೆಂಗಳೂರಿಗೆ ಬಂದ ಮೇಲೆ ಒಟ್ಟಿಗೆ ಸಂಸಾರ ನಡೆಸದೆ ಸುಧಾಳನ್ನು ದೂರ ಮಾಡಿ ಮೈಸೂರಿನ ಕೆಎಸ್‌ಆರ್‌ಟಿಸಿ ಡಿಪೋಗೆ ವರ್ಗಾವಣೆ ಮಾಡಿಕೊಂಡಿದ್ದ.

ಇದರಿಂದ ನೊಂದ ಸುಧಾ, ಒಟ್ಟಿಗೆ ಸಂಸಾರ ನಡೆಸುವಂತೆ ಒತ್ತಾಯ ಮಾಡಿದಾಗ ಬಾಡಿಗೆ ಮನೆ ಮಾಡಬೇಕೆಂದು ಈಕೆಯ ಹೆಸರಿನಲ್ಲಿ 2 ಲಕ್ಷ ರೂ. ಪಡೆದುಕೊಂಡಿದ್ದ. ಪ್ರತಿ ತಿಂಗಳು ಸುಧಾಗೆ ಬರುತ್ತಿದ್ದ ಸಂಬಳವನ್ನು ಸುಲಿಗೆ ಮಾಡುತ್ತಿದ್ದ. ಇತ್ತ ಪಾಲಕರಿಗೆ ಸಂಬಳ ಕೊಡಲು ಸಾಧ್ಯವಾಗದೆ ಮತ್ತೊಂದೆಡೆ ಪ್ರದೀಪ್ ಜತೆ ಸಂಸಾರ ನಡೆಸಲು ಸಾಧ್ಯವಾಗದೆ ನೊಂದು ಅಕ್ಕನ ಮನೆಯಲ್ಲಿ ಸುಧಾ, ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಈ ಕುರಿತು ಪೀಣ್ಯ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಬಿ.ಆರ್. ಯತಿರಾಜ್, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net