

ಕುಷ್ಟಗಿ (ಕೊಪ್ಪಳ): ಅಂಗನವಾಡಿ ಕೇಂದ್ರದಲ್ಲಿ ಸ್ನೇಹಿತರೊಂದಿಗೆ ಆಟ-ಪಾಠದಲ್ಲಿದ್ದ ಹೆಣ್ಣು ಮಗುವೊಂದು ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿದೆ. ( koppal Anganwadi )
ತಾಲೂಕಿನ ಬಳೂಟಗಿ ಗ್ರಾಮದ ಕೇಂದ್ರದಲ್ಲಿ ಸೋಮವಾರ ಘಟನೆ ಸಂಭವಿಸಿದ್ದು, ಗ್ರಾಮದ ಆಲಿಯಾ ಮಹ್ಮದ್ ರಿಯಾಜ್(5) ಮೃತ ದುರ್ದೈವಿ.
ಕೇಂದ್ರದ ಕಾರ್ಯಕರ್ತೆ ರಜೆಯಲ್ಲಿದ್ದರಿಂದ ಮಕ್ಕಳ ಪಾಲನೆಯನ್ನು ಸಹಾಯಕಿ ದ್ಯಾಮವ್ವ ಮಾಡುತ್ತಿದ್ದರು. ಉಳಿದ ಮಕ್ಕಳು ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ, ಆಲಿಯಾ ಮಾತ್ರ ತದೇಕಚಿತ್ತದಿಂದ ನೋಡುತ್ತ ಕುಳಿತದ್ದನ್ನು ಸಹಾಯಕಿ ಗಮನಿಸಿ ಮಾತನಾಡಿಸಿದ್ದಾರೆ. ಯಾವುದಕ್ಕೂ ಉತ್ತರಿಸದೆ ಮೌನವಾಗಿದ್ದ ಆಲಿಯಾ ಏಕಾಏಕಿ ಕುಸಿದು ನೆಲಕ್ಕುರುಳಿ ಅಸ್ವಸ್ಥಗೊಂಡಿದ್ದಾಳೆ. ವಿಷಯ ತಿಳಿದ ಮಗುವಿನ ಪಾಲಕರು ಅಸ್ವಸ್ಥ ಮಗುವನ್ನು ಸಮೀಪದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ, ನಂತರ ತಾಲೂಕು ಆಸ್ಪತ್ರೆಗೆ ಕರೆತಂದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಆಡಳಿತ ವೈದ್ಯಾಧಿಕಾರಿ ಕೆ.ಎಸ್.ರಡ್ಡಿ ತಿಳಿಸಿದ್ದಾರೆ. ತಾಲೂಕು ಆಸ್ಪತ್ರೆಗೆ ಧಾವಿಸಿದ ಮೃತ ಮಗುವಿನ ಸಂಬಂಧಿಗಳು ಸಹಾಯಕಿ ದ್ಯಾಮವ್ವ ಅವರನ್ನು ತರಾಟೆಗೆ ತಗೆದುಕೊಂಡರು. ಆಸ್ಪತ್ರೆಗೆ ಪಿಎಸ್‌ಐ ಹನುಮಂತಪ್ಪ ತಳವಾರ್ ಭೇಟಿ ನೀಡಿ ಪರಿಶೀಲಿಸಿದರು.