೫ ಸಾವಿರ ಬಸ್‌ಗಳ ಖರೀದಿ ಮಾಡಲಾಗುವುದು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ

KSRTC bus
Published on


ಬೆಂಗಳೂರು: ನಾಲ್ಕು ನಿಗಮಗಳಲ್ಲಿ ಇನ್ನು ಒಂದು ವರ್ಷದ ಅವಧಿಯಲ್ಲಿ ೫ ಸಾವಿರ ಹೊಸ ಬಸ್‌ಗಳನ್ನು ಖರೀದಿ ಮಾಡಲಾಗುವುದು ಹಾಗೂ ೧೩ ಸಾವಿರ ಸಿಬ್ಬಂದಿಯ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯ ಮುಂಭಾಗ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಟಾಟಾ ಮೋಟಾರ್ಸ್ ಲಿಮಿಟೆಡ್ ಬಿಎಂಟಿಸಿಗೆ ಹಸ್ತಾಂತರ ಮಾಡಿರುವ ಮೊದಲ ಎಲೆಕ್ಟ್ರಿಕ್ ಪ್ರೋಟೊಟೈಪ್ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು.

ನಿಗಮಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ೫೦೦ ಕೋಟಿ ರೂ. ಮೀಸಲು ಇಡಲಾಗಿದೆ. ಹೀಗಾಗಿ ಹೊಸದಾಗಿ ಬಿಎಂಟಿಸಿಗೆ ೧ ಸಾವಿರ ಬಸ್ ಸೇರಿ ನಾಲ್ಕು ನಿಗಮಕ್ಕೆ ಒಟ್ಟು ೫ ಸಾವಿರ ಬಸ್‌ಗಳನ್ನು ಖರೀದಿ ಮಾಡಲಾಗುವುದು. ೨೦೧೩ ರಿಂದ ಎಷ್ಟು ಬಸ್‌ಗಳು ಸಕ್ಯೆಾಪ್ ಆಗಿದ್ದಿಯೋ, ಅಷ್ಟೇ ಬಸ್‌ಗಳನ್ನು ಖರೀದಿ ಮಾಡುತ್ತೇವೆ. ಡಿಸೇಲ್ ವಾಹನಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್ ವಾಹನಗಳು ಖರ್ಚು ಕಡಿಮೆ. ಇದರಿಂದ ನಿಗಮಕ್ಕೂ ಕೂಡ ಹೆಚ್ಚನ ಲಾಭ ಬರುತ್ತದೆ. ಚಾಲಕರ ಸಂಬಳ ಮತ್ತು ಬಸ್‌ನ ನಿರ್ವಹಣೆಯ ವೆಚ್ಚವನ್ನು ಖಾಸಗಿ ಸಂಸ್ಥೆಯವರೆ ಭರಿಸಲಿದ್ದಾರೆ. ಅವರಿಗೆ ನಿಗಮವು ಪ್ರತಿ ಕಿ.ಮೀಗೆ ೪೧ ರೂ. ಪಾವತಿಸುತ್ತದೆ ಎಂದರು.

ಕೇಂದ್ರ ಸರ್ಕಾರದ ಪೇಮ್-೨ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಹವಾನಿಯಂತ್ರಣ ರಹಿತ ಹೆಚ್ಚಿನ ಬಸ್ಸುಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ. ಇಂದು ಪ್ರಾಯೋಗಿಕವಾಗಿ ಟಾಟಾ ಕಂಪನಿಯವರು ಒಂದು ಬಸ್ ಅನ್ನು ಹಸ್ತಾಂತರ ಮಾಡಲಿದ್ದಾರೆ. ಹಂತ ಹಂತವಾಗಿ ೯೨೧ ಬಿಎಂಟಿಸಿಗೆ ಇ.ವಿ ಬಸ್‌ಗಳು ಸೇರ್ಪಡೆಯಾಗಲಿದೆ. ಮುಂದಿನ ದಿನಗಳಲ್ಲಿ ನಾಲ್ಕು ನಿಗಮಗಳಲ್ಲಿಯೂ ಇ.ವಿ ಬಸ್‌ಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.

೧೩ ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ:
ನಿಗಮದಲ್ಲಿ ೨೦೧೬ ರಲ್ಲಿ ಸಿಬ್ಬಂದಿ ನೇಮಕಾತಿ ಮಾಡಲಾಗಿತ್ತು. ಸುಮಾರು ೮ ವರ್ಷಗಳಿಂದ ನೇಮಕಾತಿಯೇ ಮಾಡಿಲ್ಲ. ಹೀಗಾಗಿ ಹೊಸದಾಗಿ ಸಿಬ್ಬಂದಿ ನೇಮಕಾತಿ ಸಂಬಂಧ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸರ್ಕಾರದ ಸಮ್ಮತಿದ ಕೂಡಲೇ ಚಾಲಕರು, ನಿರ್ವಾಹಕರು ಮತ್ತು ಮೆಕ್ಯಾನಿಕ್‌ಗಳು ಸೇರಿ ೧೩ ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ನಿರೀಕ್ಷೆಗೂ ಮೀರಿದ ಪ್ರಯಾಣ:
ಶಕ್ತಿ ಯೋಜನೆಯಿಂದಾಗಿ ನಿರೀಕ್ಷೆಗೂ ಮೀರಿದ ಪ್ರಯಾಣಿಕರು ೪ ನಿಗಮದ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಬಿಎಂಟಿಸಿಯಲ್ಲಿ ಮೊದಲು ಪ್ರತಿದಿನ ೨೭ ಲಕ್ಷ ಜನ ಪ್ರಯಾಣ ಮಾಡುತ್ತಿದ್ದರು. ಇದೀಗ ೩೬ ಲಕ್ಷ ಜನ ಪ್ರಯಾಣ ಮಾಡುತ್ತಿದ್ದಾರೆ. ನಾಲ್ಕು ನಿಗಮಗಳಲ್ಲಿ ಮೊದಲು ೮೨ ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಇದೀಗ ೧.೧೦ ಕೋಟಿ ಜನರು ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕೆ ಪೂಕರವಾಗಿ ಶೆಡ್ಯುಲ್ಸ್ ಮತ್ತು ಟ್ರಿಪ್ಸ್ ಅನ್ನು ಹೆಚ್ಚಿಗೆ ಮಾಡಲಾಗಿದೆ. ಶೀಘ್ರದಲ್ಲಿಯೇ ಹೊಸ ಬಸ್‌ಗಳನ್ನು ಖರೀದಿಸಿ ಬಸ್‌ಗಳ ಅಗತ್ಯತೆ ಇರುವ ಕಡೆ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಬಿಎಂಟಿಸಿ ನಿರ್ದೇಶಕಿ ಸತ್ಯಾವತಿ, ಕೆಎಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್,ಟಿ.ಎಂ.ಎಲ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಸೀಮ್ ಮುಖ್ಯೋಪಾಧ್ಯಾಯ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net