ಕಾಂಗ್ರೆಸ್ ಸೋಲೋದಕ್ಕೆ 5 ಸ್ಟಾರ್ ಸಂಸ್ಕೃತಿ ಕಾರಣ- ಗುಲಾಂ ನಬಿ ಆಜಾದ್ ನೇರ ಮಾತು!

Gulam
Published on

ನವದೆಹಲಿ: ಸತತ ಚುನಾವಣಾ ಸೋಲು ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನೇತಾರರು ಇದೀಗ ಬಹಿರಂಗವಾಗಿಯೇ ಸೋಲಿನ ಪರಾಮರ್ಶೆ ಮಾಡಲಾರಂಭಿಸಿದ್ದಾರೆ. ನೆಹರೂ-ಗಾಂಧಿ ಕುಟುಂಬಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಪಿಲ್ ಸಿಬಲ್​ ನಂತರ ಇದೀಗ ಇನ್ನೋರ್ವ ನಾಯಕ ಗುಲಾಂ ನಬಿ ಆಜಾದ್ ನೇರ ಮಾತಿನಲ್ಲಿ ಸೋಲಿನ ಬಹಿರಂಗ ಪರಾಮರ್ಶೆ ಮಾಡಿ ಗಮನಸೆಳೆದಿದ್ದಾರೆ.

'ನಾವು ಸೋಲಿನಿಂದ ಕಂಗೆಟ್ಟಿದ್ದೇವೆ. ವಿಶೇಷವಾಗಿ ಬಿಹಾರ ಚುನಾವಣೆ ಮತ್ತು ಉಪಚುನಾವಣಾ ಫಲಿತಾಂಶಗಳು ನಮ್ಮನ್ನು ಕಂಗೆಡಿಸಿವೆ. ಸೋಲಿಗೆ ನಾನು ನಾಯಕತ್ವವನ್ನು ದೂಷಿಸಲಾರೆ. ಪಕ್ಷದೊಂದಿಗೆ ಪ್ರೀತಿಯಿಂದ ಬೆಸೆದುಕೊಂಡಿರಬೇಕಾಗಿದ್ದ ಕಾರ್ಯಕರ್ತರು ಮತ್ತು ಜನರೊಂದಿಗಿನ ಸಂಪರ್ಕವನ್ನೇ ನಮ್ಮವರು ಕಳೆದುಕೊಂಡುಬಿಟ್ಟಿದ್ದಾರೆ ಎಂದು ಗುಲಾಂ ನಬಿ ಆಜಾದ್ ಅಸಮಾಧಾನ ತೋಡಿಕೊಂಡಿದ್ದಾರೆ.

ಚುನಾವಣೆ ಎಂದರೆ ಫೈವ್​ ಸ್ಟಾರ್ ಸಂಸ್ಕೃತಿಯನ್ನು ಹೊದ್ದುಕೊಂಡಿರುವಂಥದ್ದಲ್ಲ. ಇಂದಿನ ನಾಯಕರ ಸಮಸ್ಯೆ ಏನಪ್ಪಾ ಅಂದರೆ ಪಕ್ಷ ಟಿಕೆಟ್ ಸಿಗುತ್ತಲೇ ಅವರು ಮಾಡುವ ಮೊದಲ ಕೆಲಸ ಪಂಚತಾರಾ ಹೋಟೆಲ್ ಬುಕ್ ಮಾಡುವಂಥದ್ದು. ಕಚ್ಚಾ ರಸ್ತೆಯಲ್ಲಿ ಅವರು ಸಂಚರಿಸುವುದೇ ಇಲ್ಲ. ಎಲ್ಲಿ ತನಕ ಪಂಚತಾರಾ ಸಂಸ್ಕೃತಿ ನಮ್ಮ ಪಕ್ಷದಿಂದ ದೂರಾಗುವುದಿಲ್ಲವೋ ಅಲ್ಲಿ ತನಕ ನಮಗೆ ಚುನಾವಣೆ ಗೆಲ್ಲಲಾಗದು ಎಂದು ಕಟುವಾಗಿ ಗುಲಾಂ ನಬಿ ಟೀಕಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net