ಚಿಕಿತ್ಸೆಗೆ ಒಳಗಾದ 5 ರೋಗಿಗಳಿಗೆ ಕಣ್ಣಿನ ಸೋಂಕು; ವೈದ್ಯರ ವಿರುದ್ಧ ಪ್ರಕರಣ ದಾಖಲು| doctors

doctors
Published on

ಥಾಣೆ; ನವಿ ಮುಂಬೈನ ಪ್ರಮುಖ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಐದು ರೋಗಿಗಳಲ್ಲಿ ಗಂಭೀರ ಕಣ್ಣಿನ ಸೋಂಕು ಕಂಡು ಬಂದ ಪರಿಣಾಮ, ಪರವಾನಗಿ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ನೇತ್ರತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವೈದ್ಯರು ಮಹಾರಾಷ್ಟ್ರ ವೈದ್ಯಕೀಯ ಮಂಡಳಿಯಿಂದ ತಮ್ಮ ಪರವಾನಗಿಗಳನ್ನು ನವೀಕರಿಸದೆ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಎಂದು ಎಂದು ಹೇಳಲಾಗಿದೆ. ಸಂತ್ರಸ್ತರ ದೂರುಗಳ ಕುರಿತು ಸಮಗ್ರ ತನಿಖೆ ನಡೆಸಿದ ಸಿವಿಲ್ ಸರ್ಜನ್ ಸಲ್ಲಿಸಿದ ತನಿಖಾ ವರದಿಯ ಆಧಾರದ ಮೇಲೆ ಸೋಮವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.

ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನ ವಾಶಿಯಲ್ಲಿರುವ ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ಡಿಸೆಂಬರ್ 2024 ಮತ್ತು ಮಾರ್ಚ್ 2025 ರ ನಡುವೆ ಈ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ವೈದ್ಯರು ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಆತುರ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಣಾಮ, 65 ವರ್ಷಕ್ಕಿಂತ ಮೇಲ್ಪಟ್ಟ ದಂಪತಿಗಳು ಸೇರಿದಂತೆ ಐದು ರೋಗಿಗಳ ಕಣ್ಣಿಗೆ ತೀವ್ರ ಗಾಯ ಉಂಟಾಗಿದೆ. ಶಸ್ತ್ರಚಿಕಿತ್ಸೆಗಳ ನಂತರ ಬಲಿಪಶುಗಳಿಗೆ ಸ್ಯೂಡೋಮೊನಾಸ್ ವೈರಸ್‌ನಿಂದ ಉಂಟಾದ ಗಂಭೀರ ಸೋಂಕುಗಳು ಇರುವುದು ಪತ್ತೆಯಾಗಿದೆ ಎಂದು ವಾಶಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

(ಏಜೆನ್ಸೀಸ್)

ವಾಶಿ ಪೊಲೀಸರು ಇಬ್ಬರು ವೈದ್ಯರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125(ಎ), 125(ಬಿ) (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ), ಮತ್ತು 3(5) (ಸಾಮಾನ್ಯ ಉದ್ದೇಶ) ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ಮತ್ತು ವಿವರವಾದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net