

ನವದೆಹಲಿ: ಹೊಸದಾಗಿ ಪರಿಚಯಿಸಲಾಗಿರುವ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬಳಕೆದಾರರ ಸಂಖ್ಯೆ ಕಳೆದ ನಾಲ್ಕೇ ದಿನಗಳಲ್ಲಿ ಐದು ಲಕ್ಷ ದಾಟಿದೆ. ಇದನ್ನು ಆ. 15ರಂದು ಬಿಡುಗಡೆ ಮಾಡಲಾಗಿದೆ. ಈ ಪಾಸ್ ತಮಿಳುನಾಡಿನಲ್ಲಿ ಅತಿ ಹೆಚ್ಚು ಮಾರಾಟವಾಗಿದ್ದು, ನಂತರದ ಸ್ಥಾನಗಳಲ್ಲಿ ಕರ್ನಾಟಕ ಮತ್ತು ಹರಿಯಾಣಾ ಇವೆ.
ವಾರ್ಷಿಕ ಫಾಸ್ಟ್ಯಾಗ್ ಪಾಸ್ನ ಅತಿ ಹೆಚ್ಚು ವಹಿವಾಟುಗಳು ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಟೋಲ್ ಪ್ಲಾಜಾಗಳಲ್ಲಿ ದಾಖಲಾಗಿವೆ. ಕಾರು, ವ್ಯಾನ್, ಜೀಪ್ ಮುಂತಾಗಿ ಎಲ್ಲ ವಾಣಿಜ್ಯೇತರ ವೈಯಕ್ತಿಕ ವಾಹನಗಳಿಗೆ ಈ ಪಾಸನ್ನು ಬಳಸಬಹುದಾಗಿದೆ. ರಾಜ್ವಾರ್ಗ್ ಯಾತ್ರಾ ಆಪ್ ಅಥವಾ ಎನ್ಎಚ್ಎಐ ವೆಬ್ಸೈಟ್ ಮೂಲಕ ಇದನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳ ಸುಮಾರು 1,150 ಟೋಲ್ ಬೂತ್ಗಳಿಗೆ ಈ ಪಾಸ್ ಅನ್ವಯವಾಗುತ್ತದೆ. ಇದರ ಬೆಲೆ 3 ಸಾವಿರ ರೂ. ಆಗಿದ್ದು, ಇದರಲ್ಲಿ 200 ಟೋಲ್ ಪ್ಲಾಜಾಗಳನ್ನು ದಾಟಲು ಅವಕಾಶವಿದೆ. ಒಂದು ವರ್ಷದ ಅವಧಿಯಲ್ಲಿ ಇನ್ನೂ ಸಮಯವಿದ್ದರೂ 200 ಟೋಲ್ ಪ್ಲಾಜಾ ದಾಟಿದ್ದರೆ, ಹೊಸದಾಗಿ ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.