

Highly Anticipated Films: ಕಳೆದ ವರ್ಷ ಭಾರತೀಯ ಚಲನಚಿತ್ರೋದ್ಯಮದ ಬಹುನಿರೀಕ್ಷಿತ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. ಕೆಲವು ಹೊಸ ದಾಖಲೆಗಳನ್ನು ನಿರ್ಮಿಸಲು ಪ್ರಯತ್ನಿಸಿದರೆ, ಹಲವು ಚಿತ್ರಗಳು ಹಿಂದಿನ ಸಿನಿಮಾಗಳು ನಿರ್ಮಿಸಿದ್ದ ದಾಖಲೆಗಳನ್ನು ಪುಡಿ ಪುಡಿ ಮಾಡಿ, ತಮ್ಮದೇ ನೂತನ ರೆಕಾರ್ಡ್ ಅನ್ನು ಬರೆಯುವಲ್ಲಿ ಯಶಸ್ವಿಯಾಯಿತು. ಈ ಸಾಲಿನಲ್ಲಿ ಸ್ಯಾಂಡಲ್ವುಡ್, ಟಾಲಿವುಡ್ ಮತ್ತು ಕಾಲಿವುಡ್ ಮೊದಲಿಗಿದೆ. ಮಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳು ಸಿನಿಪ್ರಿಯರನ್ನು ಮನರಂಜಿಸಲು ಎಡವಿ, ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡದೆ ಚಿತ್ರಮಂದಿರಗಳಿಂದ ಶೀಘ್ರವೇ ಗೇಟ್ಪಾಸ್ ಪಡೆಯಿತು.
ಸದ್ಯ 2024 ಮುಗಿದು, 2025ರ ನೂತನ ವರ್ಷ ಸಿನಿಪ್ರಿಯರಲ್ಲಿ ಹೊಸ ನಿರೀಕ್ಷೆ, ಉತ್ಸಾಹವನ್ನು ಹೆಚ್ಚಿಸಿದೆ. ಭಾರತೀಯ ಚಿತ್ರೋದ್ಯಮದ ಹಲವಾರು ಸಿನಿಮಾಗಳು ಈಗಾಗಲೇ ರಿಲೀಸ್ಗೆ ಸಜ್ಜಾಗಿದ್ದು, ತಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಕೂಡ ಘೋಷಿಸಿದೆ. ಎಂದಿನಂತೆ ಈ ವರ್ಷವು ತಮಿಳು ಮತ್ತು ತೆಲುಗು ಚಿತ್ರರಂಗದ ಸಿನಿಮಾಗಳೇ ರಿಲೀಸ್ ಪಟ್ಟಿಯಲ್ಲಿ ಹೆಚ್ಚಿವೆ. ಜನವರಿಯಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿಗೆ ಸಾಲು ಸಾಲು ಸಿನಿಮಾಗಳನ್ನು ತೆರೆಗೆ ತರಲು ಸಿದ್ಧತೆ ನಡೆಸಿರುವ ಟಾಲಿವುಡ್ ಮತ್ತು ಕಾಲಿವುಡ್, ಸಿನಿಪ್ರಿಯರನ್ನು ರಂಜಿಸಲು ಭರ್ಜರಿ ತಯಾರಿ ನಡೆಸಿದೆ. ಸದ್ಯ ಯಾವೆಲ್ಲಾ ಸಿನಿಮಾಗಳು ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿವೆ? ಎಂಬುದರ ವಿವರ ಹೀಗಿದೆ ಗಮನಿಸಿ.
2022ರಲ್ಲಿ ತೆರೆಕಂಡ 'ಕಾಂತಾರ ಭಾಗ 1' ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ದಾಖಲೆಯನ್ನೇ ಬರೆಯಿತು. ಕೇವಲ ದಾಖಲೆಗಳನ್ನು ಮಾತ್ರ ನಿರ್ಮಿಸದೆ, ಇಡೀ ಭಾರತವೇ ಕನ್ನಡ ಚಿತ್ರರಂಗವನ್ನು ಕೊಂಡಾಡುವಂತೆ ಮಾಡಿತು. ಕರಾವಳಿಯ ಸಂಪ್ರದಾಯ, ಸಂಸ್ಕೃತಿ ಮತ್ತು ಅಲ್ಲಿನ ದೈವಗಳ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸಿತು. ಜಾಗತಿಕ ಮಟ್ಟದಲ್ಲಿ ಪ್ರಶಂಸೆ ಪಡೆದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ 'ಕಾಂತಾರ 2' ಮೂಲಕ ಮತ್ತೇ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದ್ದಾರೆ. ಈ ಚಿತ್ರದ ರಿಲೀಸ್ಗಾಗಿ ಸದ್ಯ ಪ್ರೇಕ್ಷಕರು ತೀವ್ರ ಕಾತರ ಹೊರಹಾಕಿರುವುದು ವಿಶೇಷ. ವರದಿಗಳ ಪ್ರಕಾರ, ಕಾಂತಾರ 2 ಈ ವರ್ಷದ ಅಕ್ಬೋಬರ್ 02ರಂದು ಜಾಗತಿಕವಾಗಿ ತೆರೆಕಾಣಲಿದೆ.
ಬಾಲಿವುಡ್ ಆ್ಯಕ್ಷನ್ಗೆ ಹೆಸರುವಾಸಿಯಾದ 'ವಾರ್' ಚಿತ್ರದ ಎರಡನೇ ಭಾಗ ಈಗಾಗಲೇ ಸಿನಿಪ್ರಿಯರಲ್ಲಿ ಕೌತುಕ ಹೆಚ್ಚಿಸಿದೆ. ಬಾಲಿವುಡ್ ಹೀರೋ ಹೃತಿಕ್ ರೋಷನ್ ಮತ್ತು ಜೂ. ಎನ್ಟಿಆರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆಗಳು ವ್ಯಕ್ತವಾಗಿವೆ. ಬಹುನಿರೀಕ್ಷಿತ ಸಾಲಿನಲ್ಲಿರುವ ಈ ಸಿನಿಮಾ ಸ್ವಾತಂತ್ರ್ಯೋತ್ಸವದಂದು ರಿಲೀಸ್ ಆಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ನಟಿಸಿರುವ 'ದೇವ' ಜನವರಿ 31ರಂದು ತೆರೆಕಾಣಲು ಸಜ್ಜಾಗಿದೆ. ಆ್ಯಕ್ಷನ್-ಥ್ರಿಲ್ಲರ್ ಜಾನರ್ನಲ್ಲಿ ತಯಾರಾಗಿರುವ ಈ ಚಿತ್ರದ ಮೇಲೂ ಅಪಾರ ನಿರೀಕ್ಷೆಗಳು ಮೂಡಿದ್ದು, ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ. ಮಲಯಾಳಂನ ಖ್ಯಾತ ಚಲನಚಿತ್ರ ನಿರ್ಮಾಪಕ ರೋಶನ್ ಆಂಡ್ರ್ಯೂಸ್ ನಿರ್ದೇಶನದಲ್ಲಿ ಮೂಡಿಬಂದಿರುವ ದೇವ ಚಿತ್ರ, ವರ್ಷದ ಆರಂಭದಲ್ಲೇ ಉತ್ತಮ ಆದಾಯ ಗಳಿಸಲಿದೆ ಎಂಬ ಭರವಸೆಯ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿವೆ.
2025ರ ಈದ್ ಮಿಲಾದ್ಗೆ ರಿಲೀಸ್ ಆಗಲು ಎದುರುನೋಡುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಸಿಕಂದರ್' ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಲಿದೆಯೇ? ಎಂಬ ಚರ್ಚೆಗಳು ಬಾಲಿವುಡ್ನಲ್ಲಿ ನಡೆಯುತ್ತಿವೆ. ಎ.ಆರ್. ಮುರುಗದಾಸ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅಭಿನಯ ಬಾಲಿವುಡ್ ಮಂದಿಯ ಮನಸ್ಸನ್ನು ಗೆದ್ದು, ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲಿದೆಯೇ ಎಂಬುದನ್ನು ಸದ್ಯ ಕಾದು ನೋಡಬೇಕು.
'ಕೆಜಿಎಫ್-1', 'ಕೆಜಿಎಫ್-2' ನಂತರ ಟಾಕ್ಸಿಕ್ ಮೂಲಕ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಲು ಸಜ್ಜಾಗಿರುವ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕಿ ಗೀತು ಮೋಹನ್ದಾಸ್ ಜತೆ ಕೈಜೋಡಿಸಿ, ಹಾಲಿವುಡ್ ಮಂದಿಯ ಹುಬ್ಬೇರಿಸುವ ಹಂತಕ್ಕೆ ಚಿತ್ರವನ್ನು ರೂಪಿಸಲು ಶ್ರಮಿಸಿರುವುದು ಇತ್ತೀಚೆಗಷ್ಟೇ ರಿಲೀಸ್ ಆದ ಗ್ಲಿಂಪ್ಸ್ ವಿಡಿಯೋದಲ್ಲಿ ಕಾಣಬಹುದು. ಪ್ಯಾನ್ ಇಂಡಿಯಾ ಟಾಕ್ಸಿಕ್ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಮಾಡಲಿದೆ ಎಂದೇ ನಿರೀಕ್ಷಿಸಿರುವ ಸಿನಿಪ್ರಿಯರು, ಯಶ್ ಸಿನಿ ವೃತ್ತಿಗೆ ಟಾಕ್ಸಿಕ್ ಮತ್ತೊಂದು ಮೈಲಿಗಲ್ಲು ನೀಡಲಿದೆ ಎಂದು ಭಾವಿಸಿದ್ದಾರೆ. ಈ ಚಿತ್ರವು ಏಪ್ರಿಲ್ 10ರಂದು ತೆರೆಕಾಣುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).