ಕರೊನಾದಿಂದ ಗುಣಮುಖವಾಗುತ್ತಿದ್ದಂತೆಯೇ ಮನೆ ಬಾಗಿಲಿಗೆ ಬಂತು 5 ಕೋಟಿ ರೂಪಾಯಿ!

lottery
Published on

ಮುಂಬೈ: ಕರೊನಾದಿಂದಾಗಿ ಅನೇಕರು ಮನೆ, ಕೆಲಸವನ್ನೆಲ್ಲ ಕಳೆದುಕೊಂಡಿರುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಈ ಕರೊನಾದಿಂದ ಕಳೆದುಕೊಂಡಿಲ್ಲ, ಬದಲಾಗಿ ಬರೋಬ್ಬರಿ 5 ಕೋಟಿ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ದಿವಾ ನಿವಾಸಿ ರಾಜಕಾಂತ್​ ಪಾಟೀಲ್​​​ ಆ ಅದೃಷ್ಟವಂತ. ಉದ್ಯಮಿಯಾಗಿರುವ ಅವರಿಗೆ ಕೆಲ ದಿನಗಳ ಹಿಂದೆ ಕರೊನಾ ಸೋಂಕು ದೃಢವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಅವರಿಗೆ ನೀವು ಐದು ಕೋಟಿ ರೂಪಾಯಿ ಗೆದ್ದಿದ್ದೀರ ಎನ್ನುವ ಸಂದೇಶ ಬಂದಿದೆ. ಆದರೆ ಅದು ಫೇಕ್ ಮೆಸೇಜ್​ ಎಂದು ಅವರು ಸುಮ್ಮನಾಗಿದ್ದಾರೆ. ಅದಾದ ಮೇಲೆ ಮತ್ತೆ ಮತ್ತೆ ಕರೆ ಬಂದಿದೆ. ಅದನ್ನೂ ನಿರ್ಲಕ್ಷಿಸಿದ್ದಾರೆ. ಪದೇ ಪದೆ ಕರೆ ಬಂದಾಗ ಎತ್ತಿ ಮಾತನಾಡಿದ್ದಾರೆ. 5 ಕೋಟಿ ರೂಪಾಯಿ ಗೆದ್ದಿದ್ದೀರ ಎಂದರೆ ನಂಬಿಲ್ಲ.

ಆದರೆ ಅದರ ಬಗ್ಗೆ ಸ್ಪಷ್ಟನೆಗಾಗಿ ಅವರ ಹೆಂಡತಿ ಮತ್ತು ಸೋದರ ಮಾವ ವಿಚಾರಿಸಿದ್ದಾರೆ. ಆಗ ಐದು ಕೋಟಿ ಗೆದ್ದಿರುವುದು ಸುಳ್ಳಲ್ಲ ನಿಜವೆನ್ನುವುದು ಗೊತ್ತಾಗಿದೆ. ಕೆಲ ತಿಂಗಳ ಹಿಂದೆ ಅವರು ಲಾಟರಿ ಟಿಕೆಟ್ ಖರೀದಿಸಿದ್ದು, ಅದರ ಒಂಬತ್ತು ವಿಜೇತರಲ್ಲಿ ಇವರೂ ಒಬ್ಬರು ಎನ್ನುವುದು ತಿಳಿದುಬಂದಿದೆ.

ರಾಜಕಾಂತ್ ಕುಟುಂಬ ಈ ವಿಚಾರವಾಗಿ ಸಾಕಷ್ಟು ಖುಷಿಯಾಗಿದೆ. ಈ ಹಣದಲ್ಲಿ ಒಂದು ಭಾಗವನ್ನು ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಕೊಡುವುದಾಗಿ ಕುಟುಂಬ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net