ದಾಖಲೆ ಬರೆದ "ನಮಸ್ತೆ ಟ್ರಂಪ್​" ಈವೆಂಟ್​: 180 ಚಾನೆಲ್​ಗಳಲ್ಲಿ ನೇರ ಪ್ರಸಾರ, ವೀಕ್ಷಕರ ಸಂಖ್ಯೆ ಎಷ್ಟು ಗೊತ್ತಾ?

Namaste Trump 15
Published on

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಮ್ಮ ಕುಟುಂಬ ಸಮೇತ ಎರಡು ದಿನಗಳ ಭಾರತ ಪ್ರವಾಸ ಮುಗಿಸಿ ತವರಿಗೆ ಮರಳಿರುವುದು ಸದ್ಯಕ್ಕೆ ಹಳೆಯ ಸುದ್ದಿ. ಆದರೆ, ಇದಕ್ಕೆ ಸಂಬಂಧಪಟ್ಟ ಹೊಸ ಸುದ್ದಿ ಏನೆಂದರೆ ಗುಜರಾತಿನ ಅಹಮದಾಬಾದ್​ನಲ್ಲಿ ನಡೆದ "ನಮಸ್ತೆ ಟ್ರಂಪ್​" ಕಾರ್ಯಕ್ರಮ ದಾಖಲೆ ಬರೆದಿದೆ ಎಂಬುದು.

ಹೌದು, ಫೆ. 24ರಂದು ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಡಾಟಾವನ್ನು ಟೆಲಿವಿಷನ್​ ರೇಟಿಂಗ್​ ಏಜೆನ್ಸಿ ಬಾರ್ಕ್​(BARC- ಬ್ರಾಡ್​ಕಾಸ್ಟ್​ ಆಡಿಯನ್ಸ್​ ರೀಸರ್ಚ್​ ಕೌನ್ಸಿಲ್​), ಕೇಂದ್ರ ಸರ್ಕಾರಕ್ಕೆ ನೀಡಿದೆ. ಇದರ ಪ್ರಕಾರ ದೇಶಾದ್ಯಂತ 180 ಚಾನೆಲ್​​ಗಳು ನಮಸ್ತೆ ಟ್ರಂಪ್​ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿದ್ದು, 46 ಮಿಲಿಯನ್ (4.60 ಕೋಟಿ) ಜನರು ವೀಕ್ಷಣೆ ಮಾಡಿದ್ದಾರೆಂದು ತಿಳಿದುಬಂದಿದೆ.

ಮೊದಲನೇ ಬಾರಿಗೆ ಭಾರತ ಪ್ರವಾಸಕ್ಕೆ ಆಗಮಿಸಿದ ಅಧ್ಯಕ್ಷ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್​ಗೆ ಅದ್ಧೂರಿ ಸ್ವಾಗತವನ್ನು ನೀಡಲಾಗಿತ್ತು. ಅಹಮದಾಬಾದ್​ನ ವಿಶ್ವದ ಬಹುದೊಡ್ಡ ಕ್ರಿಕೆಟ್​ ಕ್ರೀಡಾಂಗಣ ಮೊಟೆರಾದಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, ತುಂಬಾ ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಟ್ರಂಪ್​, ಇಂತಹ ಅದ್ಧೂರಿ ಸ್ವಾಗತವನ್ನು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ಮೋದಿ ಮತ್ತು ಭಾರತೀಯರಿಗೆ ಧನ್ಯವಾದಗಳನ್ನು ತಿಳಿಸಿದ್ದರು.

ಟ್ರಂಪ್​ ದಂಪತಿ ಪ್ರವಾಸದ ಝಲಕ್

ಎರಡು ದಿನಗಳ ಪ್ರವಾಸ ನಿಮಿತ್ತ ಫೆ. 24ರ ಬೆಳಗ್ಗೆ ಅಹಮದಾಬಾದ್​ಗೆ ಬಂದಿಳಿದ ಟ್ರಂಪ್​ ದಂಪತಿ, ಅದ್ಧೂರಿ ರೋಡ್​ ಶೋ ಮೂಲಕ ಸಬರಮತಿ ಆಶ್ರಮ ಭೇಟಿ ನೀಡಿದರು. ಬಳಿಕ ವಿಶ್ವದ ಬಹುದೊಡ್ಡ ಮೊಟೆರಾ ಕ್ರಿಕೆಟ್​ ಕ್ರೀಡಾಂಗಣದಲ್ಲಿ "ನಮಸ್ತೆ ಟ್ರಂಪ್​" ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಅಹಮದಾಬಾದ್​ನಿಂದ ಆಗ್ರಾಗೆ ತೆರಳಿದ ಟ್ರಂಪ್​ ದಂಪತಿ ತಾಜ್​ ಮಹಲ್​ ವೀಕ್ಷಣೆ ಮಾಡಿದ ನಂತರ ದೆಹಲಿಗೆ ಆಗಮಿಸಿ, ಅಲ್ಲಿಯೇ ತಂಗಿದರು.

ಫೆ. 25ರ ಬೆಳಗ್ಗೆ ಟ್ರಂಪ್​ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಬಳಿಕ ರಾಜ್​ಘಾಟ್​ಗೆ ಟ್ರಂಪ್ ದಂಪತಿ ಭೇಟಿ ನೀಡಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು. ಬಳಿಕ ದೆಹಲಿಯ ಹೈದರಾಬಾದ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಇದರ ನಡುವೆ ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಮೆಲನಿಯಾ ಟ್ರಂಪ್​ ಭೇಟಿ ನೀಡಿದರು. ಮಧ್ಯಾಹ್ನ ಅಮೆರಿಕ ರಾಯಭಾರ ಕಚೇರಿಯಲ್ಲಿ ಸಿಇಒಗಳ ದುಂಡುಮೇಜಿನ ಸಭೆ ನಡೆಯಿತು. ಬಳಿಕ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರನ್ನು ಭೇಟಿ ಮಾಡಿದ ಟ್ರಂಪ್​ ಔತಣಕೂಟದಲ್ಲಿ ಪಾಲ್ಗೊಂಡರು. ಬಳಿಕ ರಾತ್ರಿ 10:30ಕ್ಕೆ ಟ್ರಂಪ್ ದಂಪತಿ​ ಅಮೆರಿಕಗೆ ಪ್ರಯಾಣ ಬೆಳೆಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net