

ಬೆಂಗಳೂರು: ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ '45’ ಹೆಸರಿನ ಚಿತ್ರ ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡಿದೆ. ಇದೀಗ ಚಿತ್ರದಲ್ಲಿ ಬರುವ ಪ್ರಮುಖ ಸನ್ನಿವೇಶವೊಂದರ ಚಿತ್ರೀಕರಣದಲ್ಲಿ ನಿರತವಾಗಿದೆ.
ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ‘45’ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ವಿವಿಧೆಡೆ ನಡೆಯುತ್ತಿದೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಉಮಾ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಬನ್ನೇರುಘಟ್ಟದ ಶ್ರೀಚಂಪಕಧಾಮ ಸ್ವಾಮಿ ದೇವಸ್ಥಾನದ ಬಳಿ ಚಿತ್ರದ ಅದ್ದೂರಿ ಸನ್ನಿವೇಶವೊಂದರ ಚಿತ್ರೀಕರಣ ನಡೆದಿದೆ. 1 ಸಾವಿರಕ್ಕೂ ಅಧಿಕ ಜನರು ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಮೋಕೋಬೋಲ್ಟ್, ರೋಪ್ ಕ್ಯಾಮೆರಾ ಸೇರಿದಂತೆ ಇನ್ನೂ ಹಲವು ದುಬಾರಿ ಸಲಕರಣೆಗಳನ್ನು ಬಳಸಿ ಈ ದೃಶ್ಯವನ್ನು ಚಿತ್ರಿಸಲಾಗಿದೆ.
ಒಂದು ಸನ್ನಿವೇಶಕ್ಕಾಗಿ 418ಕ್ಕೂ ಹೆಚ್ಚು ಕಲರ್ ಬಾಂಬ್‌ಗಳನ್ನು ಬಳಸಿರುವುದು ಕನ್ನಡದಲ್ಲಿ ಇದೇ ಮೊದಲು. ಈ ಅದ್ದೂರಿ ಸನ್ನಿವೇಶಕ್ಕೆ ಭಾರತ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಕೊರಿಯೋಗ್ರಫಿ ಮಾಡಿರುವುದು ವಿಶೇಷ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಅದ್ದೂರಿ ಸನ್ನಿವೇಶದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಈಗಾಗಲೇ ಗಾಳಿಪಟ 2 ಸೇರಿ ಹಲವು ಚಿತ್ರಗಳನ್ನು ನೀಡುತ್ತಾ ಬಂದಿರುವ ರಮೇಶ್ ರೆಡ್ಡಿ, '45' ಚಿತ್ರಕ್ಕೂ ನಿರ್ಮಾಪಕರು. ಅವರ ನಿರ್ಮಾಣದಲ್ಲಿ ಮೂಡಿಬಂದ ಚಿತ್ರಗಳಲ್ಲಿ ಬಹುತಾರಾಗಣವೂ ಹೈಲೈಟ್. ಇದೀಗ '45' ಚಿತ್ರದಲ್ಲೂ ಅದು ಮುಂದುವರಿದಿದೆ. ಈಗಾಗಲೇ ಸಂಗೀತದಲ್ಲಿ ಜನರ ಮನ ಗೆದ್ದಿರುವ ಅರ್ಜುನ್ ಜನ್ಯ, ನಿರ್ದೇಶಕರಾಗಿಯೂ ಮೊದಲ ಹೆಜ್ಜೆಯನ್ನಿಡುತ್ತಿದ್ದಾರೆ. ಅಲ್ಲದೆ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಸಹ ಒಂದೇ ಸಿನಿಮಾದಲ್ಲಿ ಇರುವುದು ನಿರೀಕ್ಷೆ ಹೆಚ್ಚಿಸಿದೆ.