ವಂಚನೆಗಿಲ್ಲ ಲಗಾಮು!: 420ಗಳಿಗೆ ಸುಲಭವಾಗಿ ಸಿಗ್ತಿದೆ ಕೋರ್ಟ್ ಜಾಮೀನು

Front
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

ಹಣ ದ್ವಿಗುಣ, ಹೆಚ್ಚಿನ ಬಡ್ಡಿ, ಕಮಿಷನ್ ಆಮಿಷ, ನಿವೇಶನ-ಚಿನ್ನದ ಮೇಲೆ ಹೂಡಿಕೆ ಆಸೆ ತೋರಿಸಿ ಜನರಿಗೆ ವಂಚಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ವಂಚಕ ಕಂಪನಿಗಳ ಧೋಖಾ ಬಹಿರಂಗವಾಗಿದ್ದರೂ ಜನರು ಜಾಗೃತರಾಗದಿರುವುದು ಪೊಲೀಸರಿಗೂ ತಲೆನೋವಾಗಿದೆ. ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 4,357 ವಂಚನೆ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಶೇ.50 ವಂಚನೆ ಪ್ರಕರಣಗಳು ಮಾತ್ರವೇ ಠಾಣೆಗೆ ಬರುತ್ತವೆ. ಆರೋಪಿಗಳಿಂದ ಬೆದರಿಕೆ, ಪದೇಪದೆ ವಿಚಾರಣೆ, ಪೊಲೀಸ್ ಠಾಣೆಗೆ ಅಲೆಯುವುದು, ಕೋರ್ಟ್​ಗೆ ಹಾಜರಾಗುವುದು ಮತ್ತು ಹೇಗೆ ದೂರು ಕೊಡಬೇಕೆಂಬ ಮಾಹಿತಿ ಕೊರತೆಯಿಂದಾಗಿ ಉಳಿದ ಶೇ.50 ಕೇಸ್​ಗಳು ಬೆಳಕಿಗೆ ಬರುವುದೇ ಇಲ್ಲ.

ರಾಜ್ಯದಲ್ಲಿ 8 ಸಾವಿರಕ್ಕೂ ಅಧಿಕ ವಂಚನೆ ಕೇಸ್​ಗಳು ಇನ್ನೂ ತನಿಖಾ ಹಂತದಲ್ಲಿವೆ. 2020ರಲ್ಲಿ ಲಾಕ್​ಡೌನ್ ಇದ್ದರೂ 4,699 ವಂಚನೆ ಪ್ರಕರಣ ದಾಖಲಾದರೆ, ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 4,08,915 ಪ್ರಕರಣ ಬೆಳಕಿಗೆ ಬಂದಿದೆ. ಈ ಪೈಕಿ ಪೋಂಝಿ ಸ್ಕೀಂನ ಚೀಟಿಂಗ್ ಕೇಸ್​ಗಳೇ ಅಧಿಕವಾಗಿವೆ. ವಂಚನೆ ಪ್ರಕರಣಗಳಿಂದ ವಾರ್ಷಿಕವಾಗಿ ಕರ್ನಾಟಕದಲ್ಲೇ ನೂರಾರು ಕೋಟಿ ರೂ. ಮೋಸ ಆಗುತ್ತಿದೆ.

ಬಹುಕೋಟಿ ವಂಚನೆಯ 45 ಕೇಸ್: 15 ವರ್ಷದಲ್ಲಿ 45ಕ್ಕೂ ಅಧಿಕ ಬೃಹತ್ ಪ್ರಮಾಣದ ಬಹುಕೋಟಿ ವಂಚನೆ ಸ್ಕೀಂಗಳು ಬೆಳಕಿಗೆ ಬಂದಿವೆ. ಬೇಗ ಶ್ರೀಮಂತರಾಗುವ ಕನಸುಕಂಡು ಇಂತಹ ಸ್ಕೀಂಗಳಲ್ಲಿ ಹಣ ಹೂಡಿಕೆ ಮಾಡಿದ ಲಕ್ಷಾಂತರ ಜನ ನಷ್ಟಕಂಡಿದ್ದಾರೆ. ಕಳೆದ ಜೂನ್​ನಲ್ಲಿ ರಾಜ್ಯದಲ್ಲಿ ದಾಖಲಾಗಿದ್ದ 268 ವಂಚನೆ ಕೇಸ್, ಅಕ್ಟೋಬರ್​ನಲ್ಲಿ 459ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ 265, ಆಗಸ್ಟ್​ನಲ್ಲಿ 288, ಸೆಪ್ಟೆಂಬರ್​ನಲ್ಲಿ 379 ಕೇಸ್​ಗೆ ಸಂಬಂಧಿಸಿದಂತೆ ದೂರು ದಾಖಲಾಗಿವೆ.

ಜಾಮೀನು ಸುಲಭ: ಎಷ್ಟೇ ಕೋಟಿ ರೂ. ವಂಚನೆ ಮಾಡಿದರೂ ಐಪಿಸಿ ಸೆಕ್ಷನ್ 420 ಪ್ರಕಾರ ಪ್ರಕರಣ ದಾಖಲಾಗುತ್ತದೆ. ಪೊಲೀಸರು ಎಫ್​ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದರೂ ನ್ಯಾಯಾಲಯಗಳಲ್ಲಿ ಸುಲಭವಾಗಿ ಜಾಮೀನು ಸಿಗುತ್ತದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಪುನಃ ಅದೇ ವಂಚನೆ ಪ್ರಕ್ರಿಯೆ ಮುಂದುವರಿಯುತ್ತಾರೆ. ಆದ್ದರಿಂದ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ: ವಂಚನೆ ಆರೋಪ ಸಾಬೀತಾದರೆ 7 ವರ್ಷ ಜೈಲು ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಬಹುತೇಕ ಪ್ರಕರಣಗಳು ತನಿಖಾ ಹಂತದಲ್ಲೇ ಇವೆ. ಸಾಕ್ಷ್ಯಾಧಾರ ಕೊರತೆ, ವಿಚಾರಣೆ ಸಂದರ್ಭದಲ್ಲಿ ದೂರುದಾರರೇ ಪ್ರತಿಕೂಲ ಸಾಕ್ಷ್ಯ ನುಡಿಯುವುದು, ದೂರು ವಾಪಸ್ ಪಡೆಯುವುದು ಸೇರಿ ಹಲವು ಕಾರಣಗಳಿಂದಾಗಿ ಬಹುತೇಕ ಕೇಸ್​ಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ.

ಇಎಂಐ ಸಂದೇಶ ನೋಡಿ ಶಾಕ್!: ಪ್ರತಿ ತಿಂಗಳು ಖಾತೆಗೆ ಹಣ ಬರುತ್ತೆ ಎಂದು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪಡೆದು ವಂಚಿಸಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಟೇಲರ್ ಆಗಿರುವ ವಿದ್ಯಾರಣ್ಯಪುರದ ನಯಿಮ್ ತಾಜ್ ಎಂಬ ಮಹಿಳೆಗೆ ಪರಿಚಯವಾಗಿದ್ದ ಗುಲ್ಜರ್ ಭಾನು, ಸ್ಕೀಂವೊಂದರ ಪಾಲುದಾರರಾದರೆ ಪ್ರತಿ ತಿಂಗಳು ಹಣ ಪಡೆಯಬಹುದು ಎಂದು ನಂಬಿಸಿದ್ದಳು. ನಯೀಮ್ ತನ್ನ ಆಧಾರ್, ಪಾನ್​ಕಾರ್ಡ್ ಕೊಟ್ಟು, ಪರಿಚಿತ 24 ಜನರನ್ನು ಆರೋಪಿಗಳಿಗೆ ಪರಿಚಯಿಸಿ ಗ್ರಾಹಕರನ್ನಾಗಿ ಮಾಡಿದ್ದಳು. ಕೆಲ ದಿನಗಳ ಬಳಿಕ ಈ ಸ್ಕೀಂಗೆ ಸೇರಿದವರಿಗೆ ವಿವಿಧ ಬ್ಯಾಂಕ್​ಗಳಿಂದ ಇಎಂಐ ಪಾವತಿಸುವಂತೆ ಕರೆ ಬರಲಾರಂಭಿಸಿವೆ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ, ಇವರಿಂದ ಪಡೆದ ಆಧಾರ್, ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಇವರ ಹೆಸರಿನಲ್ಲೇ ಬ್ಯಾಂಕ್​ನಿಂದ ಸಾಲ ಪಡೆದು ಮೊಬೈಲ್, ಬೈಕ್ ಖರೀದಿಸಿರುವುದು ಗೊತ್ತಾಗಿದೆ.

ಯಾವ ವರ್ಷದಲ್ಲಿ ಎಷ್ಟು ವಂಚನೆ?

  • 2018: 1,35,812
  • 2019: 1,44,707
  • 2020: 1,28,396

ಪ್ರಮುಖ ವಂಚನೆ ಪ್ರಕರಣ

  • 2004ರಲ್ಲಿ ವಿನಿವಿಂಕ್​ನಿಂದ 20000 ಗ್ರಾಹಕ ರಿಗೆ 204 ಕೋಟಿ ರೂ. ಗೂ ಅಧಿಕ ವಂಚನೆ
  • ಐಎಂಎ ಕೇಸ್​ನಲ್ಲಿ ಸಾವಿರಾರು ಗ್ರಾಹಕರಿಗೆ 4 ಸಾವಿರ ಕೋಟಿ ರೂ. ವಂಚನೆ
  • ಆಂಬಿಡೆಂಟ್ ಕಂಪನಿ 15000ಕ್ಕೂ ಅಧಿಕ ಜನರಿಗೆ 984 ಕೋಟಿ ರೂ.ಗೂ ಅಧಿಕ ಮೋಸ
  • ಅಗ್ರಿಗೋಲ್ಡ್ ಕಂಪನಿ ದೇಶಾದ್ಯಂತ 32 ಲಕ್ಷ ಜನರಿಗೆ 7 ಸಾವಿರ ಕೋಟಿ ರೂ. ವಂಚಿಸಿದೆ
  • ಕ್ಯೂ ನೆಟ್ ಕಂಪನಿ ನೂರಾರು ಕೋಟಿ ಮೋಸ. ಕ್ಲೇಮ್ೆ ಸಕ್ಷಮ ಪ್ರಾಧಿಕಾರ ರಚಿಸಿದ ಸರ್ಕಾರ

ಹೇಗೆಲ್ಲ ವಂಚನೆ?

  • 1 ಲಕ್ಷ ರೂ. ಹೂಡಿಕೆ ಮಾಡಿದರೆ ಒಂದೇ ತಿಂಗಳಲ್ಲಿ 2 ಲಕ್ಷ ರೂ. ನೀಡುವುದಾಗಿ ಆಮಿಷ
  • ಅಧಿಕ ಬಡ್ಡಿ ಕೊಡುವ ಆಮಿಷ, ಹಲವರನ್ನು ಸದಸ್ಯರಾಗಿಸಿದರೆ ಕಮಿಷನ್ ಕೊಡುವ ಆಸೆ
  • ಚಿನ್ನ, ಸೈಟ್ ಹಾಗೂ ವಿವಿಧ ಉದ್ಯಮಗಳ ಮೇಲೆ ಹೂಡಿಕೆ ಮಾಡಿದ ಲಾಭಾಂಶದ ಆಮಿಷ
  • ಬ್ಯಾಂಕ್ ಸಾಲ ಕೊಡಿಸುವುದಾಗಿ ಆಧಾರ್, ಪಾನ್​ಕಾರ್ಡ್ ಮಾಹಿತಿ ಪಡೆದು ದುರ್ಬಳಕೆ
  • ಹೆಚ್ಚು ಜನರನ್ನು ಸದಸ್ಯರನ್ನಾಗಿಸಿದರೆ ಹೆಚ್ಚಿನ ಕಮಿಷನ್ ಜತೆಗೆ ವಿದೇಶಿ ಪ್ರವಾಸ ಪ್ಯಾಕೇಜ್
  • ಮನೆಯಲ್ಲಿ ಕುಳಿತು ಆನ್​ಲೈನ್​ನಲ್ಲೇ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ದುಡ್ಡು ಮಾಡಬಹುದು
  • ಸ್ಕೀಂ ಸದಸ್ಯರಾದರೆ ಪ್ರತಿತಿಂಗಳು ಹಣ ಬರುತ್ತೆ ಎಂದು ಪಾನ್/ಆಧಾರ್ ಕಾರ್ಡ್ ಪಡೆದು ಸಾಲ ಐಎಂಎ, ವಿನಿವಿಂಕ್, ಅಗ್ರಿಗೋಲ್ಡ್, ಗುರುಟೀಕ್, ಅಜ್ಮೆರಾ, ಅಲೀಫ್, ಅಲ ವೆಂಚರ್ಸ್, ಕಾರ್ವಿ ಸ್ಟಾಕ್ ಬ್ರೋಕಿಂಗ್, ಆಂಬಿಡೆಂಟ್, ವಿಕ್ರಂ ಇನ್​ವೆಸ್ಟ್​ಮೆಂಟ್, ಇಂಜಾಸ್ ಇಂಟರ್ ನ್ಯಾಷನಲ್, ಬರಕ್ಯೂ, ಪವರ್ ಬ್ಯಾಂಕ್, ಕ್ಯೂ ನೆಟ್ ಸೇರಿ ಇನ್ನಿತರ ಕಂಪನಿಗಳು ಅಧಿಕ ಬಡ್ಡಿಯ ಆಮಿಷವೊಡ್ಡಿ ಲಕ್ಷಾಂತರ ಜನರಿಗೆ ಕೋಟಿ-ಕೋಟಿ ವಂಚನೆ ಮಾಡಿವೆ. ಇಂತಹ ಅನೇಕ ಪ್ರಕರಣಗಳ ಬಗ್ಗೆ ಹಲವು ವರ್ಷಗಳಿಂದ ಸಿಐಡಿ ಹಾಗೂ ಸಿಸಿಬಿ ತನಿಖೆ ನಡೆಯುತ್ತಲೇ ಇವೆ.

ಹೂಡಿಕೆಗೆ ಮುನ್ನ ಎಚ್ಚರ

  • ಹಣ ಹೂಡಿಕೆಗೆ ಮುನ್ನ ಕಂಪನಿಗಳ ಹಿನ್ನೆಲೆ ತಿಳಿದುಕೊಳ್ಳಿ
  • ವಂಚಕ ಕಂಪನಿಗಳ ಬಗ್ಗೆ ಪರಿಚಿತರಿಗೂ ತಿಳಿಸಿ, ಪೊಲೀಸರಿಗೂ ಮಾಹಿತಿ ಕೊಡಿ
  • ನಿಯಮ ಏನಿದೆ? ಕಂಪನಿ ಕಾನೂನು ನಿಯಮ ಪಾಲಿಸಿದೆಯೆ?
  • ಹಣ ಹೂಡಿಕೆಗೆ ಅಧಿಕೃತ ದಾಖಲೆಗಳನ್ನು ವೀಕ್ಷಿಸಲು ಅನುಮತಿ ಇದೆಯೇ?
  • ಸಾರ್ವಜನಿಕರಿಂದ ಪಡೆದ ಹಣವನ್ನು ಕಂಪನಿ ಯಾವುದರ ಮೇಲೆ ಹೂಡಿಕೆ ಮಾಡುತ್ತಿದೆ?
  • ನಮಗೆ ಕೊಡುವ ಲಾಭದ ಹಣ ಎಲ್ಲಿಂದ ಬರುತ್ತೆ? ಎಷ್ಟು ದಿನದವರೆಗೆ ಬರುತ್ತೆ ಗಮನಿಸಿರಿ
  • ಬಹುತೇಕ ಕಂಪನಿಗಳು ನಂಬಿಕೆ ಗಿಟ್ಟಿಸಲು ಆರಂಭದಲ್ಲಿ ಕೊಟ್ಟು ನಂತರ ಕೈ ಕೊಡುತ್ತವೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net