

ಬೆಂಗಳೂರು: ಹಣ ದ್ವಿಗುಣ ಮಾಡಿಕೊಡುವುದಾಗಿ ವ್ಯಕ್ತಿಗೆ ನಂಬಿಸಿ ಸ್ನೇಹಿತೆಯೇ 20 ಲಕ್ಷ ರೂ. ಪಡೆದು ವಂಚಿಸಿದ್ದಾಳೆ. ಕೆಂಗೇರಿಯ ಮೇಗಲ ಬೀದಿ ನಿವಾಸಿ ಮಂಜುನಾಥ್ ವಂಚನೆಗೆ ಒಳಗಾದವರು. ಕೃತ್ಯ ಎಸಗಿ ಪರಾರಿಯಾಗಿರುವ ರಮ್ಯಾ ಹಾಗೂ ಆಕೆಯ ಸಹಚರರ ಬಂಧನಕ್ಕೆ ಕೆಂಗೇರಿ ಠಾಣೆ ಪೊಲೀಸರು ಬಲೆಬೀಸಿದ್ದಾರೆ.
3 ವರ್ಷದ ಹಿಂದೆ ನನಗೆ ಸ್ನೇಹಿತ ಪ್ರಸನ್ನ ಎಂಬಾತನ ಮೂಲಕ ರಮ್ಯಾಳ ಪರಿಚಯವಾಯಿತು. ಇತ್ತೀಚೆಗೆ ಕರೆ ಮಾಡಿದ್ದ ಆಕೆ, ನಿಮ್ಮ ಬಳಿ ಇರುವ ಹಣವನ್ನು ಕೊಟ್ಟರೆ ನಾವು ಅದಕ್ಕೆ ಎರಡು ಪಟ್ಟು ಮರಳಿಸುತ್ತೇವೆ ಎಂದು ತಿಳಿಸಿದಳು. ಅದನ್ನು ನಂಬಿ ಜೂ.27 ರಂದು ಬೆಳಗ್ಗೆ 8 ಗಂಟೆಗೆ ರಮ್ಯಾಳ ಜತೆ 20 ಲಕ್ಷ ರೂ. ಸಮೇತ ಉತ್ತರಹಳ್ಳಿ ರಸ್ತೆಗೆ ಹೋದೆ. ಅಲ್ಲಾಗಲೇ ಮತ್ತೊಂದು ಕಾರಿನಲ್ಲಿ ಅಪರಿಚಿತರು ಕುಳಿತಿದ್ದರು. ತಕ್ಷಣವೇ ನನ್ನ ಕಾರಿನಿಂದ ಹಣ ತೆಗೆದುಕೊಂಡ ಇಳಿದ ರಮ್ಯಾ, ನಿಮಗೆ ಕರೆ ಮಾಡುವುದಾಗಿ ಹೇಳಿ ಆ ಕಾರಿನಲ್ಲಿ ಹೊರಟಳು. ಆದರೆ ಆಕೆಯಿಂದ ಯಾವುದೇ ಕರೆ ಬರಲಿಲ್ಲ. ನಾನು ಕರೆ ಮಾಡಿದಾಗ ಆಕೆಯ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿತ್ತು ಎಂದು ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.
ಕೆಂಗೇರಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕರೊನಾ ಸೋಂಕು ಹಿನ್ನೆಲೆಯಲ್ಲಿ ಕೆಂಗೇರಿ ಠಾಣೆ ಸೀಲ್ಡೌನ್ ಆಗಿ ಸಿಬ್ಬಂದಿ ಕ್ವಾರಂಟೈನ್ಗೊಳಗಾಗಿದ್ದರು. ಹೀಗಾಗಿ ತನಿಖೆಗೆ ಆಡಚರಣೆಯಾಗಿತ್ತು. ಠಾಣೆ ಮತ್ತೆ ಕಾರ್ಯಾರಂಭಿಸಿದ ಕೂಡಲೇ ವಂಚಕರನ್ನು ಪತ್ತೆಹಚ್ಚಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.