42 ಕಲಾ ವಿಷಯಗಳಿಗೆ ಸಂಬಂಧಿಸಿದಂತೆ ಒಡಂಬಡಿಕೆ

8
Published on

ಮೈಸೂರಿನ ಸಂಗೀತ ವಿವಿ ಸೇರಿದಂತೆ ಭಾರತದಲ್ಲಿರುವ ಹಲವಾರು ಕಲಾ ವಿವಿಗಳ ಸುಮಾರು 42 ಕಲಾ ವಿಷಯಗಳಿಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ಯುಎಸ್‌ಎ ಬ್ರಿಡ್ಜ್‌ವಾಟರ್ ಸ್ಟೇಟ್ ವಿಶ್ವವಿದ್ಯಾಲಯದ ಅಧ್ಯಕ್ಷ ಫ್ರೆಡರಿಕ್ ಡಬ್ಲುೃ ಕ್ಲಾರ್ಕ್ ಜ್ಯೂನಿಯರ್ ಹೇಳಿದರು.

ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಾನಪದ ಪ್ರಾತ್ಯಕ್ಷಿಕೆ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉತ್ಕೃಷ್ಟ ಸಂಸ್ಕೃತಿ, ಕಲೆಗೆ ವಿಶ್ವದಲ್ಲೇ ಹೆಸರಾಗಿರುವ ಭಾರತದೊಂದಿಗೆ ನಮ್ಮ ವಿಶ್ವವಿದ್ಯಾನಿಲಯವು ಒಡಂಬಡಿಕೆ ಮಾಡಿಕೊಳ್ಳಲು ಆದ್ಯತೆ ನೀಡುವುದಾಗಿ ತಿಳಿಸಿದರು.

ನಮ್ಮ ವಿವಿಯು ಸಂಗೀತ, ನೃತ್ಯ ಮುಂತಾದ ಕಲಾ ವಿಭಾಗಗಳಲ್ಲಿ ಶಿಕ್ಷಣವನ್ನು ನೀಡುತ್ತಿದ್ದು, ಈ ಸಂಬಂಧ ವಿಶ್ವದೆಲ್ಲೆಡೆ ಇರುವ ವಿವಿಧ ಸಂಸ್ಕೃತಿ ಮತ್ತು ಕಲೆಯನ್ನು ಅರಿಯಲು ಪರಸ್ಪರ ಭೇಟಿ ಮತ್ತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬೋಧಕರು ಮತ್ತು ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಯೋಜನೆಗೆ ಮುಂದಾಗಿದ್ದೇವೆ ಎಂದರು.

ನಮ್ಮ ಅಮೆರಿಕೆಯ ಬ್ರಿಡ್ಜ್‌ವಾಟರ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸರಿ ಸುಮಾರು 10ಸಾವಿರ ವಿದ್ಯಾರ್ಥಿಗಳು ವಿವಿಧ ಕಲಾ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವರು. ನಮ್ಮ ವಿಶ್ವವಿದ್ಯಾನಿಲಯವು ವಿಶ್ವದಾದ್ಯಂತ ಇರುವ ಪ್ರಮುಖ ವಿವಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದರು.

ಹಾಡು, ದೇಶೀಯ ಕುಣಿತ, ಹೂವು ಮುಂತಾದುವುಗಳೊಂದಿಗೆ ತಾವು ನಮ್ಮ ತಂಡವನ್ನು ಬರಮಾಡಿಕೊಂಡ ಪರಿ ನಿಮ್ಮ ಸಂಸ್ಕೃತಿಯ ಉಜ್ವಲ ವಿಶಿಷ್ಠತೆ ಹಾಗೂ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಅಲ್ಲದೇ ಸ್ಫೂರ್ತಿದಾಯಕವಾಗಿತ್ತು ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ವಹಿಸಿದ್ದರು. ದೇಶೀ ಜಾನಪದ ತಜ್ಞ, ಚಲನಚಿತ್ರ ಸಂಗೀತ ನಿರ್ದೇಶಕ ಡಾ.ಹಂಸಲೇಖ, ರಾಮನಗರ ಜಾನಪದ ಲೋಕ ಅಧ್ಯಕ್ಷರು ಹಾಗೂ ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ. ಪಿ.ಜಿ. ಬೋರಲಿಂಗಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net