

ಕುವೈತ್: ವಲಸೆ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 41 ಮಂದಿ ಸಾವಿಗೀಡಾಗಿರುವ ಘಟನೆ ದಕ್ಷಿಣ ಕುವೈತ್ನಲ್ಲಿ ಬುಧವಾರ (ಜೂನ್ 12) ನಡೆದಿದೆ. ಈ ಅವಘಡದಲ್ಲಿ ಡಜನ್‌ಗಟ್ಟಲೆ ಮಂದಿಗೆ ಗಂಭೀರ ಗಾಯವಾಗಿರುವುದಾಗಿ ಕುವೈತಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಮಂಗಾಫ್ ನಗರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಗೆ ಆಹುತಿಯಾದ ಕಟ್ಟಡವನ್ನು ವಲಸೆ ಕಾರ್ಮಿಕರನ್ನು ಇರಿಸಲು ಬಳಸಲಾಗುತ್ತಿತ್ತು ಮತ್ತು ಅಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಇದ್ದರು ಎಂದು ಹಿರಿಯ ಪೊಲೀಸ್ ಕಮಾಂಡರ್ ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿರುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದೆ.
ಸದ್ಯ ಡಜನ್‌ಗಟ್ಟಲೆ ಜನರನ್ನು ರಕ್ಷಿಸಲಾಗಿದೆ. ಆದರೆ, ದುರದೃಷ್ಟವಶಾತ್ ಬೆಂಕಿಯಿಂದ ಉಂಟಾದ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೇ 41 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಕಾಸರಗೋಡು ಚೆರ್ಕಳ ನಿವಾಸಿ ರಂಜಿತ್ ಕುಂಡಡ್ಕ(25) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದವರು ಇದ್ದಾರೆಯೇ ಎನ್ನುವ ಮಾಹಿತಿ ಸದ್ಯಕ್ಕೆ ಸಿಗುತ್ತಿಲ್ಲ. ಅಲ್ಲಿನವರನ್ನು ಸಂಪರ್ಕಿಸಿದರೆ, ಇನ್ನೂ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ ಎನ್ನುವ ಉತ್ತರ ಸಿಗುತ್ತಿದೆ. ಸದ್ಯ ಮಾಹಿತಿ ಕಲೆಹಾಕುವ ಕೆಲಸ ನಡೆಯುತ್ತಿದೆ.
ಸಂತ್ರಸ್ತರ ಕುಟುಂಬಗಳಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಾಂತ್ವನ ಹೇಳಿದ್ದಾರೆ. ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತೀವ್ರ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಮತ್ತು ಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ನಮ್ಮ ರಾಯಭಾರ ಕಚೇರಿಯು ಸಂಪೂರ್ಣ ಸಹಾಯವನ್ನು ನೀಡುತ್ತದೆ ಎಂದು ಹೇಳಿದರು.
ಬೆಂಕಿ ಅವಘಡಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಘಡದಿಂದಾಗಿ 43 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುವೈತ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಇದರಲ್ಲಿ ನಾಲ್ವರು ದಾಖಲಾದ ನಂತರ ಮೃತಪಟ್ಟಿದ್ದಾರೆ. ಸದ್ಯ ಒಟ್ಟು 41 ಮಂದಿ ಅಸುನೀಗಿದ್ದಾರೆ.
ಇದೇ ಸಂದರ್ಭದಲ್ಲಿ ಕುವೈತ್ ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾಹ್ ಅವರು ಬೆಂಕಿ ಅವಘಡ ಸಂಭವಿಸಿದ ಮಂಗಾಫ್ ಕಟ್ಟಡದ ಮಾಲೀಕರನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್)