ಗಮನಬೇರೆಡೆ ಸೆಳೆದು 409 ಗ್ರಾಂ ಚಿನ್ನ ಕಳವು

crime-022204-16x9.jpg
Published on

ಬೆಂಗಳೂರು: ಗಾಂಧಿನಗರಕ್ಕೆ ಊಟಕ್ಕೆ ಹೋಗಿದ್ದ ಕುಟುಂಬದ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ 20.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್‌ನ್ನು ಕಿಡಿಗೇಡಿಗಳು ದೋಚಿದ್ದಾರೆ.

ಚಿಕ್ಕಮಗಳೂರು ಮೂಲದ ನೀರಾ ದಿಲೀಪ್ ಜೈನ್, ಈ ಕುರಿತು ಉಪ್ಪಾರಪೇಟೆ ಠಾಣೆಗೆ ದೂರು ಸಲ್ಲಿಸಿದ್ದಾರೆ.ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೀರಾ ದಿಲೀಪ್ ಕುಟುಂಬ ಸಂಬಂಧಿಕರ ಮದುವೆ ಸಲುವಾಗಿ ಬೆಂಗಳೂರಿಗೆ ಕಾರಿನಲ್ಲಿ ಬಂದಿದ್ದರು. ಚಿನ್ನಾಭರಣವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಬಂದಿದ್ದು, ಗಾಂಧಿನಗರದ 3ನೇ ಮುಖ್ಯರಸ್ತೆಯಲ್ಲಿ ಇರುವ ಗ್ರಾೃಂಡ್ ಕಾಳಿಂಗ ಹೋಟೆಲ್‌ಗೆ ಊಟಕ್ಕೆಂದು ಹೋಗಿದ್ದರು. ಕಾರು ಪಾರ್ಕ್ ಮಾಡುವ ಸಲುವಾಗಿ ಹೋಟೆಲ್ ಮುಂಭಾಗ ನಿಂತಿದ್ದರು. ಅಷ್ಟೊತ್ತಿಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಕೆಳಗೆ ದುಡ್ಡು ಬಿದ್ದಿದೆ ನೋಡಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾನೆ.

ಕಾರಿನಲ್ಲಿ ಇದ್ದವರು ಕೆಳಗೆ ಇಳಿದು ನೋಟು ತೆಗೆದುಕೊಳ್ಳುವಷ್ಟರಲ್ಲಿ ಹಿಂಬದಿ ಸೀಟ್‌ನಲ್ಲಿ ಇಟ್ಟಿದ್ದ ಚಿನ್ನಾಭರಣವಿದ್ದ ಬ್ಯಾಗ್‌ನ್ನು ಕದ್ದು ಪರಾರಿಯಾಗಿದ್ದ. ಕಾರು ಪಾರ್ಕ್ ಮಾಡಿ ಬ್ಯಾಗ್ ತೆಗೆದುಕೊಳ್ಳಲು ನೋಡಿದಾಗ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಗಮನ ಬೇರೆಡೆ ಸೆಳೆದು ಚಿನ್ನವಿದ್ದ ಬ್ಯಾಗ್ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ನೀರಾ ದಿಲೀಪ್ ಜೈನ್ ಉಲ್ಲೇಖಿಸಿದ್ದಾರೆ.ಈಮೇರೆಗೆ ಪ್ರಕರಣ ದಾಖಲಿಸಿಕೊಂಡು ಕೃತ್ಯ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net