ಚೀನಾದಿಂದ ಹೊರಬಿದ್ದ ಮತ್ತೊಂದು ಆತಂಕಕಾರಿ ಸುದ್ದಿ; ತನಿಖೆ ಪ್ರಾರಂಭಿಸಿದ ಅಧಿಕಾರಿಗಳು

China
Published on

ಈ ಚೀನಾದಲ್ಲಿ ಏನಾಗ್ತಿದೆ? ಒಂದಲ್ಲ ಒಂದು ಹುಬ್ಬೇರಿಸುವ, ಆತಂಕಕಾರಿ ಸುದ್ದಿಯನ್ನು ಈ ದೇಶ ಕೊಡುತ್ತಲೇ ಇದೆ.

ಹಾಗೇ ಮತ್ತೊಂದು ಶಾಕಿಂಗ್​ ಸುದ್ದಿಗೆ ಚೀನಾ ಸಾಕ್ಷಿಯಾಗಿದ್ದು, ಸುಮಾರು 4,000ಗಳಷ್ಟು ನಾಯಿ, ಬೆಕ್ಕು, ಮೊಲ ಸೇರಿ ಆ ಜಾತಿಗೆ ಸೇರಿದ ಪ್ರಾಣಿಗಳ ಮೃತದೇಹ ಪತ್ತೆಯಾಗಿದೆ. ಅದೂ ಪ್ಲಾಸ್ಟಿಕ್​ನಲ್ಲಿ ಸುತ್ತಿ, ಮರದ ಮತ್ತು ಕಬ್ಬಿಣದ ಪಂಜರದ ಬಾಕ್ಸ್​​ಗಳಲ್ಲಿ ಹಾಕಿ, ಬಿಸಾಕಲಾಗಿದೆ.

ಇವನ್ನೆಲ್ಲ ಪೆಟ್​​ಗಳು ಎಂದು ಆನ್​​ಲೈನ್​ನಲ್ಲಿ ಖರೀದಿಸಿ, ಇದೀಗ ಹೀಗೆ ಅನಾಥ ಹೆಣಗಳನ್ನಾಗಿ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಎಲ್ಲ ಪ್ರಾಣಿಗಳನ್ನು ಉದ್ದೇಶಪೂರ್ವಕವಾಗಿಯೇ ಕೊಲ್ಲಲಾಗಿದೆಯಾ ಎಂಬ ಅನುಮಾನವೂ ಶುರುವಾಗಿದೆ. ಪ್ರಾಣಿ ಸಂರಕ್ಷಣಾ ಗುಂಪೊಂದು ಈ ಘಟನೆಯ ಬಗ್ಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ಸಿಸಿಬಿ ನೋಟಿಸ್​ ಬರುತ್ತಿದ್ದಂತೆ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಅನುಶ್ರೀ ಕರೆ ಮಾಡಿದ್ದರು!

ಇದನ್ನೊಂದು ಘೋರ ಕೃತ್ಯ ಎಂದು ಹೇಳಿರುವ ಪ್ರಾಣಿ ಸಂರಕ್ಷಣಾ ಗುಂಪು, ಮಧ್ಯ ಚೀನಾದ ಲಾಜಿಸ್ಟಿಕ್​ ಹಬ್​ವೊಂದರಲ್ಲಿ ಸುಮಾರು ಒಂದು ವಾರದಿಂದಲೂ ಈ ಪ್ರಾಣಿಗಳು ಸಿಲುಕಿಕೊಂಡಿದ್ದವು. ವಿಷಯ ತಿಳಿದ ರಕ್ಷಣಾ ಗುಂಪಿಗೆ 1000 ಪ್ರಾಣಿಗಳನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ಉಳಿದ 4,000 ಪ್ರಾಣಿಗಳು ಮೃತಪಟ್ಟಿವೆ. ಅದರಲ್ಲಿ ನಾಯಿ, ಬೆಕ್ಕು, ಮೊಲ ಸೇರಿ ದಂಶಕ ಜಾತಿಗೆ ಸೇರಿದ ಹಲವು ಪ್ರಾಣಿಗಳು ಇವೆ ಎಂದು ಹೇಳಲಾಗಿದೆ.

ನಾವು ಇಂಥ ಪ್ರಾಣಿಗಳನ್ನು ಈ ಹಿಂದೆಯೂ ರಕ್ಷಣೆ ಮಾಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪೆಟ್​ಗಳು ಮೃತಪಟ್ಟಿದ್ದನ್ನು ನೋಡುತ್ತಿದ್ದೇವೆ ಎಂದು ಪ್ರಾಣಿ ರಕ್ಷಣಾ ಎನ್​ಜಿಒ ಒಂದರ ಅಧಿಕಾರಿ ತಿಳಿಸಿದ್ದಾರೆ.

ವಿಷಯ ಹೊರಬೀಳುತ್ತಿದ್ದಂತೆ ತನಿಖೆಯೂ ಶುರುವಾಗಿದೆ. ಆನ್​ಲೈನ್​ನಲ್ಲಿ ಸಾಕುಪ್ರಾಣಿಗಳನ್ನು ಮಾರಾಟ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net