ಸೌದಿ ಅರೇಬಿಯಾದಲ್ಲಿ 4,000 ಭಾರತೀಯ ಉಮ್ರಾ ಯಾತ್ರಿಕರು ಪರದಾಟ; ಕೇಂದ್ರಕ್ಕೆ ಓವೈಸಿ ಮನವಿ | Owaisi on Umrah Pilgrims

ಸೌದಿ ಅರೇಬಿಯಾದಲ್ಲಿ ಸಿಲುಕಿರುವ 4,000 ಭಾರತೀಯ ಉಮ್ರಾ ಯಾತ್ರಿಕರನ್ನು ತಕ್ಷಣವೇ ಸ್ವದೇಶಕ್ಕೆ ಕರೆತರುವಂತೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
Owaisi on Umrah Pilgrims
ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಉಮ್ರಾ ಯಾತ್ರಿಕರ ನೆರವಿಗೆ ಓವೈಸಿ ಮನವಿ.
Published on: 
Summary

ಮದೀನಾ, ಜಿಡ್ಡಾ, ಮೆಕ್ಕಾದಲ್ಲಿ 4,000 ಭಾರತೀಯ ಯಾತ್ರಿಕರ ಪರದಾಟ

ಏಜೆಂಟರ ನಿರ್ಲಕ್ಷ್ಯದಿಂದ ಯಾತ್ರಿಕರಿಗೆ ಸಂಕಷ್ಟ ಎಂದ ಓವೈಸಿ

ದೊಡ್ಡ ವಿಮಾನ ಹಾರಾಟಕ್ಕೆ ಅನುಮತಿ ನೀಡಲು ಓವೈಸಿ ಆಗ್ರಹ

Umrah Pilgrims Saudi Arabia: ಸೌದಿ ಅರೇಬಿಯಾದ ಮದೀನಾ, ಜಿಡ್ಡಾ ಮತ್ತು ಮೆಕ್ಕಾದಲ್ಲಿ ಕಳೆದ ಎರಡು ಮೂರು ವಾರಗಳಿಂದ ಸುಮಾರು 4,000 ಭಾರತೀಯ ಉಮ್ರಾ ಯಾತ್ರಿಕರು ಸಿಲುಕಿಕೊಂಡಿದ್ದು, ಅವರ ನೆರವಿಗೆ ತಕ್ಷಣವೇ ಧಾವಿಸುವಂತೆ ಎಐಎಂಐಎಂ (AIMIM) ಮುಖ್ಯಸ್ಥ ಅಸದುದ್ದೀನ್ ಓವೈಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರವಾಸಿ ಏಜೆಂಟರು ಯಾತ್ರಿಕರನ್ನು ಅರ್ಧದಲ್ಲೇ ಕೈಬಿಟ್ಟು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಯಾತ್ರಿಕರು ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಓವೈಸಿ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.

DGCA ಅನುಮತಿಗೆ ಒತ್ತಾಯ

ಯಾತ್ರಿಕರು ಇಂಡಿಗೋ, ಆಕಾಶ್ ಏರ್ ಹಾಗೂ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಿದ್ದರು. ಆದರೆ ಜಿಡ್ಡಾಗೆ ದೊಡ್ಡ ವಿಮಾನಗಳನ್ನು (A321) ಕಾರ್ಯಾಚರಣೆ ಮಾಡಲು ಡಿಜಿಸಿಎ (DGCA) ಅನುಮತಿ ನೀಡುತ್ತಿಲ್ಲ. ಹೀಗಾಗಿ ತಕ್ಷಣವೇ ಅನುಮತಿ ನೀಡಿ ಸಂಕಷ್ಟದಲ್ಲಿರುವವರನ್ನು ಕರೆತರಬೇಕು ಎಂದು ಓವೈಸಿ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರವೇ ವಿಶೇಷ ವಿಮಾನ ಕಳಿಸಬೇಕು

ಒಂದು ವೇಳೆ ಈ ಮೂರು ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲು ಸಾಧ್ಯವಾಗದಿದ್ದರೆ, ಕೇಂದ್ರ ಸರ್ಕಾರವೇ ವಿಶೇಷ ವಿಮಾನಗಳನ್ನು ಕಳುಹಿಸಿ ಯಾತ್ರಿಕರನ್ನು ಕರೆತರಬೇಕು. ಯಾಕೆಂದರೆ ಇವರಲ್ಲಿ ಬಹುತೇಕರು ಬಡ ಕುಟುಂಬದವರಾಗಿದ್ದು, ಸೌದಿ ಏರ್‌ಲೈನ್ಸ್‌ನ ದುಬಾರಿ ಟಿಕೆಟ್‌ಗಳನ್ನು ಖರೀದಿಸುವ ಶಕ್ತಿ ಅವರಿಗಿಲ್ಲ ಎಂದು ಓವೈಸಿ ತಿಳಿಸಿದ್ದಾರೆ.

ಇದನ್ನೂ ಓದಿ: Dream facts: ಕನಸಿನಲ್ಲಿ ಎಂದೂ ಕಾಣದ ಜಾಗ, ಅಪರಿಚಿತ ಮುಖಗಳು ಬರುತ್ತಾ? ಇದರ ರಹಸ್ಯ ಏನು ಗೊತ್ತಾ!

ಈ ವಿಷಯದಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ತಕ್ಷಣವೇ ಹಸ್ತಕ್ಷೇಪ ಮಾಡಿ, ಯಾತ್ರಿಕರಿಗೆ ಅಗತ್ಯ ನೆರವು ನೀಡಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕು ಎಂದು ಓವೈಸಿ ಮನವಿ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net