ಬೆಳಗಾವಿಯಲ್ಲಿ 400 ಕೊಠಡಿಗಳ ಶಾಸಕರ ಭವನ;  ಸಚಿವರ ಜತೆ ಚರ್ಚೆ|400 Room MLA building

UT KHADAR
Published on

ಬೆಂಗಳೂರು: ಬೆಳಗಾವಿಯಲ್ಲಿ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತೆ 400 ಕೊಠಡಿಗಳ ಬಹು ಉಪಯೋಗಿ ಕಟ್ಟಡ ನಿರ್ಮಿಸುವ ಉದ್ದೇಶವಿದೆ(The intention is to build a 400 room multi-purpose building) ಎಂದು ಸ್ಪೀಕರ್ ಯು.ಟಿ.ಖಾದರ್(UT Khadar) ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷ ಚಳಿಗಾಲದ ಅಧಿವೇಶನ ನಡೆಯುತ್ತದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕಿದೆ. ಈ ದೃಷ್ಟಿಯಿಂದ ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದ ಮಾದರಿಯಲ್ಲಿ 400 ಕೊಠಡಿಗಳ ಶಾಸಕರ ಭವನ ನಿರ್ಮಿಸುವ ಉದ್ದೇಶವಿದೆ. ಈ ಬಗ್ಗೆ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಧಾನಸೌಧಕ್ಕೆ ವಿದ್ಯುದ್ದೀಪಾಲಂಕಾರ

ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪ ಅಲಂಕಾರ ಮಾಡಲಾಗುತ್ತದೆ. ಏಪ್ರಿಲ್ ಮೊದಲ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ದೀಪಾಲಂಕಾರಕ್ಕೆ 5ಕೋಟಿ ರೂ.ವೆಚ್ಚವಾಗುತ್ತಿದೆ. ಪ್ರತಿ ಶನಿವಾರ, ಭಾನುವಾರ ಸಂಜೆ 6.30ಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ರಾಷ್ಟ್ರಿಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೊತ್ಸವ, ಗಾಂಧಿ ಜಯಂತಿ ಹಾಗೂ ಕನ್ನಡ ರಾಜ್ಯೊತ್ಸವ ಸಂದರ್ಭಗಳಲ್ಲಿ ವಿದ್ಯುತ್ ದೀಪಾಲಂಕಾರವಿರುತ್ತದೆ. ಇದರಿಂದ ಜನರಿಗೆ ವಿಧಾನಸೌಧ ವೀಕ್ಷಣೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಪುಸ್ತಕ ಮೇಳಕ್ಕೆ ಮೆಚ್ಚುಗೆ ಮಹಾಪೂರ

ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರತಿ ವರ್ಷ ಪುಸ್ತಕ ಮೇಳ ಮಾಡಲಾಗುವುದು. ಬೆಳಗಾವಿಯಲ್ಲಿ ಅಧಿವೇಶನ ಸಂದರ್ಭದಲ್ಲಿ ಪುಸ್ತಕ ಮೇಳ ಮಾಡಬೇಕೆಂಬ ಬೇಡಿಕೆಯಿದ್ದು, ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಜನರನ್ನು ದೂರ ಇಡುವುದು ಬೇಡ

ಭದ್ರತೆ ಹೆಸರಿನಲ್ಲಿ ಜನರನ್ನು ವಿಧಾನಸೌಧ ವೀಕ್ಷಣೆಯಿಂದ ದೂರ ಇಡುವುದು ಸರಿಯಲ್ಲ. ಎಲ್ಲರನ್ನೂ ವೈರಿ, ಶತ್ರು ಅಥವಾ ಕಳ್ಳರಂತೆ ನೋಡಬಾರದು. ಶೇ.1ರಷ್ಟು ಸಮಾಜಘಾತಕ ಶಕ್ತಿಗಳು ಇರಬಹುದು. ಅವರಿಗೆ ಹೆದರಿ ಶೇ.99ರಷ್ಟು ಜನರನ್ನು ವಂಚಿತರನ್ನಾಗಿ ಮಾಡಬಾರದು. ಪುಸ್ತಕ ಮೇಳ ಸಂದರ್ಭದಲ್ಲಿ ವಿಧಾನಸೌಧ, ವಿಧಾನಸಭೆಯ ಮೊಗಸಾಲೆ ಸಭಾಂಗಣವನ್ನು ವೀಕ್ಷಣೆ ಮಾಡಿ ಬಹಳಷ್ಟು ಜನರು ಖುಷಿ ಪಟ್ಟಿದ್ದಾರೆ. ಪ್ರತಿ ಭಾನುವಾರ ವಿಧಾನಸೌಧದ ವೀಕ್ಷಣೆಗೆ ಅವಕಾಶ ನೀಡುವ ಬಗ್ಗೆಯೂ ಚಿಂತನೆಯಿದೆ ಎಂದು ಖಾದರ್ ತಿಳಿಸಿದರು.

15 ದಿನ ಕಲಾಪ ನಡೆದಿದೆ. 99. 34 ಗಂಟೆ ಒಟ್ಟು ಕಲಾಪ ನಡೆದಿದೆ. 27 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. 3096 ಪ್ರಶ್ನೆ ಸ್ವೀಕರಿಸಲಾಗಿದ್ದು, 195 ಪ್ರಶ್ನೆಗಳಲ್ಲಿ 189 ಕ್ಕೆ ಉತ್ತರಿಸಲಾಗಿದೆ. 2 ಖಾಸಗಿ ವಿಧೇಯಕಗಳನ್ನ ಮಂಡಿಸಲಾಗಿದೆ. ಎರಡು ಹಕ್ಕುಚ್ಯುತಿಗಳು ಮಂಡನೆಯಾಗಿದ್ದವು. ಅವುಗಳನ್ನು ಹಕ್ಕುಭಾಧ್ಯತಾ ಸಮಿತಿಗೆ ನೀಡಲಾಗಿದೆ ಎಂದು ಯು.ಟಿ. ಖಾದರ್ ಹೇಳಿದರು.

ಸರ್ಕಾರ ಭದ್ರತೆ ಹೆಚ್ಚಿಸಲಿ

ಪೊಲೀಸರು ಇರುವುದೇ ಸಮಾಜಘಾತಕ ಶಕ್ತಿಗಳನ್ನು ನಿಗ್ರಹಿಸಲು. ಆದರೆ ಸಾಮಾನ್ಯ ಜನರ ವಿಧಾನಸೌಧ ವೀಕ್ಷಣೆಗೆ ತೊಂದರೆ ಕೊಡುವುದು ಬೇಡ. ವಿಧಾನಸಭೆಯ ಸಭಾಂಗಣ ವೀಕ್ಷಿಸಿದ ಒಬ್ಬರು ಕುಂಭಮೇಳಕ್ಕೆ ಹೋಗುವುದಕ್ಕಿಂತಲೂ ಹೆಚ್ಚಿನ ಖುಷಿಯಾಗಿದೆ ಎಂದು ಹೇಳಿದ್ದಾರೆ ಎಂದು ಖಾದರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net