

ಚಾಮರಾಜನಗರ: ಹೊರಗುತ್ತಿಗೆ ನೌಕರರ ಮೇಲೆ ಎ್ಐಆರ್ ದಾಖಲಾಗಿದೆ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಲಾಗಿದ್ದ ಚಾ.ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಸಿಮ್ಸ್ ನೌಕರರು ನಡೆಸುತ್ತಿದ್ದ ಅನಿರ್ದಿಷ್ಠಾವಧಿ ಮುಷ್ಕರ 40ನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಸಿಮ್ಸ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮಹದೇವ್ ಮಾತನಾಡಿ, ಸುಮಾರು 24 ಕಾರ್ಮಿಕರನ್ನು ಎ್ಐಆರ್ ದಾಖಲಾಗಿದೆ ಎಂಬ ಕಾರಣಕ್ಕೆ ಕೆಲಸದಿಂದ ಹೊರಹಾಕಲಾಗಿದೆ. ಕಳೆದ 38 ದಿನಗಳಿಂದಲೂ ಜಿಲ್ಲಾಡಳಿತ ಭವನದ ಮುಂಭಾಗ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಜಿಲ್ಲಾಡಳಿತವಾಗಲಿ ಅಥವಾ ಸಿಮ್ಸ್ ಆಡಳಿತ ಮಂಡಳಿಯಾಗಲಿ ಈ ವರೆಗೂ ನಮ್ಮ ಕಷ್ಟವನ್ನು ಆಲಿಸಿಲ್ಲ. ಈ ಮೂಲಕ ಸುಮಾರು 24 ಬಡ ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ ಎಂದು ಅಳಲು ತೋಡಿಕೊಂಡರು.
ಸಿಮ್ಸ್ ಆಡಳಿತ ಮಂಡಳಿಯ ನಿರ್ದೇಶಕರು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಕಾರ್ಮಿಕ ಇಲಾಖೆಯೂ ಕೂಡ ಯಾವುದೇ ಕ್ರಮವಹಿಸಿಲ್ಲ. ವಿನಃ ಕಾರಣ ನಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆಗಾಗಿ ನಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವವರೆಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸುತ್ತೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರಾದ ಕುಮಾರ್, ಆದರ್ಶಕುಮಾರ್, ಮಹೇಶ್, ವಿನಯ್, ಮಂಜು, ಉಮಾಪತಿ, ಬಿರೇಗೌಡ, ದೊರೆರಾಜ್, ಮಹದೇವಸ್ವಾಮಿ ಭಾಗವಹಿಸಿದ್ದರು.
ಸಮಸ್ಯೆ ಬಗೆಹರಿಸುವಂತೆ ಸೂಚನೆ:
ಕೆಲಸದಿಂದ ವಜಾಗೊಳಿಸಿರುವ ಕಾರ್ಮಿಕರನ್ನು ಮರುನೇಮಕ ಮಾಡಿಕೊಂಡು ಬಾಕಿ ಇರುವ ವೇತನವನ್ನು ಪಾವತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೂಚನೆ ನೀಡಿದ್ದಾರೆ. ಸಿಮ್ಸ್ ಕಾರ್ಮಿಕ ಸಂಘದ ಪದಾಧಿಕಾರಿಗಳ ಮೇಲೆ ಎ್ಐಆರ್ ದಾಖಲಾಗಿದೆ ಎಂಬ ಕಾರಣನೀಡಿ ಸಹಜ ನ್ಯಾಯಕ್ಕೆ ವಿರುದ್ಧವಾಗಿ ಹಾಗೂ ಯಾವುದೇ ಆಂತರಿಕ ವಿಚಾರಣೆ ಮಾಡದೇ ಒಂದು ವರ್ಷದ ಹಿಂದೆ ವಜಾಗೊಳಿಸಿರುವ ಕಾರ್ಮಿಕರನ್ನು ಮರುನೇಮಕ ಮಾಡಿಕೊಳ್ಳಬೇಕು ಅವರಿಗೆ ಬಾಕಿ ವೇತನವನ್ನು ಪವತಿ ಮಾಡಬೇಕು ಎಂದು ಸಿಮ್ಸ್ ನಿರ್ದೇಶಕರಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದಾಗ್ಯೂ ಕೂಡ ನೌಕರರನ್ನು ನೇಮಕ ಮಾಡಿಕೊಳ್ಳಲು ನಿರ್ದೇಶಕರು ಮೀನಾಮೇಷ ಎನಿಸುತ್ತಿದ್ದಾರೆ. ಈ ಮೂಲಕ ಬಡ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹೊರಗುತ್ತಿಗೆ ನೌಕರರು ದೂರಿದರು.