ಗೊಬ್ಬರ ಹಾಕಿದ ನೀರು ಕುಡಿದು 40 ಮೇಕೆಗಳು ಬಲಿ| Goats

goat
Published on

ಕೊಯಮತ್ತೂರು: ಈ ಸಾಕು ಪ್ರಾಣಿಗಳನ್ನು ಮೇಯಿಸಲೆಂದು ಹೊಲದ ಕಡೆ ಕರೆದುಕೊಂಡು ಹೋದಾಗ ಅದರ ಮಾಲೀಕರು ಸ್ವಲ್ಪ ಎಚ್ಚರಿಕೆ ವಹಿಸಬೇಕಾಗಿರುತ್ತದೆ. ಇಲ್ಲದಿದ್ದರೆ ಆ ಮೂಕ ಪ್ರಾಣಿಗಳು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಕೆಲಸವನ್ನು ಮಾಡಿಬಿಡುತ್ತವೆ. ಅಂದಹಾಗೆ ಇಲ್ಲೊಂದು ಅಂತಹದ್ದೇ ಒಂದು ಘಟನೆ ನಡೆದಿದೆ. ತಮಿಳುನಾಡಿನ ತೊಂಡಮುತ್ತೂರು ಬಳಿಯ ಕಾಳಿಮಂಗಲಂ ಗ್ರಾಮದ ಬಾಳೆ ತೋಪಿನಲ್ಲಿ ಗೊಬ್ಬರ ಬೆರೆಸಿದ ನೀರು ಕುಡಿದು 40 ಮೇಕೆಗಳು ಸಾವನ್ನಪ್ಪಿವೆ. ಇನ್ನೂ ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮೇಕೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಬಲಿಯಾಗಿರುವ ಮೇಕೆಗಳು ಕಾಳಿಮಂಗಲಂ ವಸಾಹತು ಪ್ರದೇಶದ ಸಾವಿತ್ರಿ, ವಿಜಯ, ಕಣ್ಣಮ್ಮ ಮತ್ತು ಮಂಗಳಂ ಎಂಬ ನಾಲ್ವರು ಬುಡಕಟ್ಟು ಮಹಿಳೆಯರಿಗೆ ಸೇರಿದ್ದವಾಗಿದ್ದವು ಎಂದು ಹೇಳಲಾಗಿದೆ.

ಅಲ್ಲಿನ ಮಹಿಳೆಯರು ಸ್ಥಳೀಯ ಪಶುವೈದ್ಯರಿಗೆ ಮಾಹಿತಿ ನೀಡಿದ್ದು, ಅವರು ಸತ್ತ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ರಸಗೊಬ್ಬರ ಬೆರೆಸಿದ ನೀರು ಕುಡಿದ ಕಾರಣ ಪ್ರಾಣಿಗಳು ಸಾವನ್ನಪ್ಪಿವೆ ಎಂದು ತಿಳಿಸಲಾಗಿದೆ.

ಮೇಕೆಗಳು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮೇವು ತಿಂದ ಬಳಿಕ, ಆಡುಗಳು ಮತ್ತು ಅವುಗಳ ಮಾಲೀಕರು ಅದೇ ಹಳ್ಳಿಯಲ್ಲಿರುವ ಬಾಳೆ ತೋಟದ ಮೂಲಕ ಹಾದು ಹೋಗಬೇಕಾಗಿತ್ತು. ಈ ಸಂದರ್ಭದಲ್ಲಿ ತೋಟದ ಬಳಿ ನೀರಾವರಿ ಕಾಲುವೆಗಳ ಮೂಲಕ ಹರಿಯುತ್ತಿದ್ದ ನೀರನ್ನು ಮೇಕೆಗಳು ಕುಡಿದಿದ್ದು, ಅವುಗಳಲ್ಲಿ ಕೆಲವು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನೂ ಕೆಲವು ಮೇಕೆಗಳು ಅಸ್ವಸ್ಥವಾಗಿದ್ದವು ಎನ್ನಲಾಗಿದೆ.

ಮಾಲೀಕರ ಅಳಲು:

ಇನ್ನೂ ಈ ಘಟನೆ ಸಂಬಂಧ ಮೇಕೆಗಳನ್ನು ಸಾಕಿದ್ದ ಮಾಲೀಕರು ಬೇಸರ ಹೊರಹಾಕಿದ್ದಾರೆ. ಈ ಘಟನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಏಕೆಂದರೆ ಬೇಸಿಗೆಯ ಕಾರಣದಿಂದ ತೋಟಕ್ಕೆ ಮಾಲೀಕರು ಗೊಬ್ಬರ ಬೆರೆಸಿದ್ದಾರೆಂದು ನಮಗೆ ತಿಳಿದಿದೆ. ನಾವು ಮೇಕೆ ಸಾಕಣೆಯ ಮೇಲೆ ಮಾತ್ರ ಅವಲಂಬಿತರಾಗಿರುವುದರಿಂದ ಮುಂದಿನ ಕೆಲವು ತಿಂಗಳುಗಳಲ್ಲಿ ಉಳಿದ ಮೇಕೆಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಅಂದಹಾಗೆ ನಾವು ನಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದೇವೆ ಮತ್ತು ರಾಜ್ಯ ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ಮೇಕೆ ಸಾಕಿದ್ದ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net