

ಲಖನೌ: ಉತ್ತರ ಪ್ರದೇಶದ ಪಯಾಗ್ಪುರ ತಹಸೀಲ್ ವ್ಯಾಪ್ತಿಯ ಪಹಲ್ವಾರಾ ಗ್ರಾಮದ ಅಕ್ರಮ ಮದರಸಾದ ಶೌಚಗೃಹದಲ್ಲಿ 40 ಬಾಲಕಿಯರನ್ನು ಕೂಡಿ ಹಾಕಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಮೂರು ಮಹಡಿಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾದ ಪರಿಶೀಲನೆಗೆ ಬುಧವಾರ ಅಧಿಕಾರಿಗಳು ತೆರಳಿದ್ದಾಗ ಅಲ್ಲಿನ ಅಕ್ರಮ ಬಯಲಾಗಿದೆ ಎಂದು ಪಯಾಗ್ಪುರ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಶ್ವಿನಿ ಕುಮಾರ್ ಪಾಂಡೆ ತಿಳಿಸಿದ್ದಾರೆ. ಬುಧವಾರ ಅಲ್ಲಿಗೆ ತೆರಳಿದ್ದಾಗ ಮೇಲಿನ ಮಹಡಿಗಳಿಗೆ ತೆರಳಲು ಮದರಸಾ ನಿರ್ವಾಹಕರು ಅವಕಾಶ ನೀಡಲಿಲ್ಲ. ಪೊಲೀಸರ ಸಮ್ಮುಖದಲ್ಲಿ ಆವರಣವನ್ನು ಪ್ರವೇಶಿಸಿದಾಗ ಟೆರೇಸ್ನಲ್ಲಿರುವ ಶೌಚಗೃಹವೊಂದರ ಬೀಗ ಹಾಕಿರುವುದು ಗಮನಕ್ಕೆ ಬಂತು. ಮಹಿಳಾ ಪೊಲೀಸ್ ಸಿಬ್ಬಂದಿಯ ನೆರವಿನಿಂದ ಬಾಗಿಲನ್ನು ತೆರೆದಾಗ ಶೌಚಗೃಹದಲ್ಲಿ 9ರಿಂದ 14 ವಯಸ್ಸಿನ 40 ಮಕ್ಕಳು ಬಚ್ಚಿಟ್ಟು ಕೊಂಡಿದ್ದು ತಿಳಿಯಿತು.