ಹಿಂದಿನ ಬಿಜೆಪಿ ಸರ್ಕಾರದ ಮೇಲಿನ 40% ಕಮಿಷನ್ ಭ್ರಷ್ಟಾಚಾರ ಸಾಬೀತಾಗಿದೆ: CM ಸಿದ್ದರಾಮಯ್ಯ

dk - 2025-05-20T163457.911
Published on

ಹಿಂದಿನ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಇತ್ತು. ನಾವು ಇದರ ವಿರುದ್ಧ ಹೋರಾಟ ಮಾಡಿದೆವು, ಅಧಿಕಾರಕ್ಕೆ ಬಂದ ಬಳಿಕ ತನಿಖೆಗೆ ನಾಗಮೋಹನ್ ದಾಸ್ ಸಮಿತಿ ರಚಿಸಿದೆವು. ಸಮಿತಿ ಕೊಟ್ಟಿರುವ ವರದಿಯಲ್ಲಿ ಕಮಿಷನ್ ವ್ಯವಹಾರ ಸಾಬೀತಾಗಿದೆ ಎಂದು ಮುಖ್ಯಮಂತ್ರಿ (CM) ಸಿದ್ದರಾಮಯ್ಯ ಹೇಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಂಗಳವಾರ ಕಂದಾಯ ಇಲಾಖೆ ಆಯೋಜಿಸಿದ್ದ "ಸಮರ್ಪಣೆ ಸಂಕಲ್ಪ" ಸಮಾವೇಶದಲ್ಲಿ ಮಾತನಾಡಿದರು.

ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದೇ ಇಲ್ಲ

ಈಗ ಜೆಡಿಎಸ್ ಮತ್ತು ಬಿಜೆಪಿ ಕೂಡಿಕೊಂಡಿವೆ. ಆದರೆ ಬಿಜೆಪಿ ಇದುವರೆಗೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲೇ ಇಲ್ಲ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದದ್ದು ಬಿಟ್ಟರೆ ರಾಜ್ಯದಲ್ಲಿ ಬಿಜೆಪಿ ಇವತ್ತಿನವರೆಗೂ ಜನರಿಂದ ಆಯ್ಕೆಯೇ ಆಗಿಲ್ಲ ಎಂದರು.

ಚಿನ್ನದ ಬೆಲೆ ಈಗ ಎಷ್ಟಿದೆ?

2014 ರಲ್ಲಿ 10000 ಇದ್ದ ಚಿನ್ನದ ಬೆಲೆ ಈಗ ಲಕ್ಷ ಆಗಿದೆ. ಗ್ಯಾಸ್ ಬೆಲೆ 400 ಇದ್ದದ್ದು ಈಗ 850 ಆಗಿದೆ. ಡೀಸೆಲ್, ಪೆಟ್ರೋಲ್, ಎಣ್ಣೆ, ಕಾಳು, ಬೇಳೆ, ರಸಗೊಬ್ಬರ ಎಲ್ಲದರ ಬೆಲೆಯನ್ನೂ ಆಕಾಶಕ್ಕೆ ಏರಿಸಿರುವ ಕೇಂದ್ರದ ಮೋದಿಯವರ ಸರ್ಕಾರದ ವಿರುದ್ಧ ಜನಾಕ್ರೋಶ ಇದೆಯೇ ಹೊರತು ನಮ್ಮ ಸರ್ಕಾರದ ಪರವಾಗಿ ಜನಾಭಿಪ್ರಾಯ ಇದೆ ಎಂದರು.

ಸರ್ವ ಜನಾಂಗದ ಶಾಂತಿಯ ತೋಟ

ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಸರ್ವರನ್ನೂ ಸಮಾನವಾಗಿ ಗೌರವಿಸುವ ರಾಜ್ಯ. ಸಂವಿಧಾನದ ಅಡಿಯಲ್ಲಿ ಸರ್ವ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು. ನಾವು ಇದೇ ಮೌಲ್ಯವನ್ನು ಪಾಲಿಸುತ್ತಿದ್ದೇವೆ ಎಂದರು.

ಕೇಂದ್ರ ಸರ್ಕಾರದಿಂದ ಪ್ರತೀ ವರ್ಷ ನಮಗೆ ನಷ್ಟ ಆಗುತ್ತಿದೆ. ನಾವು ಪ್ರತೀ ವರ್ಷ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೊಟ್ಟರೆ ನಮಗೆ ವಾಪಾಸ್ ಬರುವುದು ಒಂದು ರೂಪಾಯಿಗೆ 14 ಪೈಸೆ ಮಾತ್ರ. ಇದರಿಂದ ಒಕ್ಕೂಟ ವ್ಯವಸ್ಥೆಯ ಘನತೆ ಹಾಳು ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net