4 ಲಕ್ಷಕ್ಕೂ ಹೆಚ್ಚು ಜನರಿಂದ ದಸರಾ ಫಲಪುಷ್ಪ ಪ್ರದರ್ಶನ ವೀಕ್ಷಣೆ

df290f1f-8d3c-4a7e-8a83-aefa63469bc8
Published on

ಅವಿನಾಶ್ ಜೈನಹಳ್ಳಿ ಮೈಸೂರು

ಹೂಗಳಲ್ಲೇ ನಿರ್ಮಿಸಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಮಹತ್ವ ಸಾರುವ ಆಕೃತಿಗಳು...ಗಾಂಧಿ ಮಂಟಪ, ದಂಡಿಯಾತ್ರೆ... ಅಷ್ಟೇ ಅಲ್ಲ, ಅಲಂಕಾರಿಕ ಹೂ ಕುಂಡಗಳು, ಕಲಾಕೃತಿಗಳು ಲಕ್ಷಾಂತರ ಜನರ ಹೃನ್ಮನ ತಣಿಸಿವೆ.

12 ದಿನಗಳ ಕಾಲ ಆಯೋಜಿಸಿದ್ದ ದಸರಾ ಫಲಪುಷ್ಪ ಪ್ರದರ್ಶನ ಈ ಬಾರಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ದೇಶ, ವಿದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು ಲಕ್ಷಾಂತರ ಜನರು ದಸರಾ ಫಲಪುಷ್ಪ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಜತೆಗೆ ತಮ್ಮ ಮೆಚ್ಚುಗೆಯ ಕಲಾಕೃತಿಗಳ ಜತೆ ಫೋಟೋ ಕ್ಲಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.

ದಸರಾ ಮಹೋತ್ಸವದ ಪ್ರಯುಕ್ತ ತೋಟಗಾರಿಕಾ ಇಲಾಖೆ ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿದ್ದ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡು ವಾರಗಳ ಕಾಲ ಬರೋಬ್ಬರಿ 4 ರಿಂದ 5 ಲಕ್ಷಕ್ಕೂ ಹೆಚ್ಚಿನ ಜನರು ಪ್ರದರ್ಶನ ವಿಕ್ಷೀಸಿದರು. ಹೆಜ್ಜೆ ಹೆಜ್ಜೆಗೂ ನಿರ್ಮಿಸಿದ್ದ ಗಾಂಧೀಜಿ ತತ್ವ ಸಂದೇಶಗಳ ಮಾದರಿಗಳನ್ನು ವೀಕ್ಷಿಸಿ ಜನ ಮೈಮರೆತರು. ಬಣ್ಣ ಬಣ್ಣ ಹೂಗಳ ಮಧ್ಯೆ ಅರಳಿದ ರಾಜರ್ಷಿ ನಾಲ್ವಡಿ ಪ್ರತಿಮೆ, ಹೂವಿಂದ ಕಂಗೊಳಿಸುತ್ತಿರುವ ಅಂಬಾರಿ ಹೊತ್ತ ಆನೆ, ತಂಟೆಗೆ ಬಂದ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಆಪರೇಷನ್ ಸಿಂಧೂರದ ಮಾದರಿ, ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಮಾದರಿಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

ಫಲಪುಷ್ಪ ಪ್ರದರ್ಶನ ಈ ಬಾರಿ ವಿಭಿನ್ನವಾಗಿತ್ತು. ಅಚ್ಚುಕಟ್ಟಾಗಿ ಪ್ರದರ್ಶನ ಆಯೋಜಿಸಲಾಗಿತ್ತು ಎಂಬ ಉತ್ತಮ ಪ್ರತಿಕ್ರಿಯೆಗಳು ಕೇಳಿಬಂದಿದೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಿದ್ದಾರೆ. ಒಟ್ಟಾರೆ ಫಲಪುಷ್ಪ ಪ್ರದರ್ಶನವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಮಹಾತ್ಮ ಗಾಂಧೀಜಿ ಆದರ್ಶಗಳನ್ನು ಸಾರಲಾಯಿತು. ಗಾಂಧೀಜಿಯ ನೆನಪಿಗಾಗಿ ಕುಪ್ಪಣ್ಣ ಪಾರ್ಕ್ ಗಾಜಿನ ಮನೆಯಲ್ಲಿ ಕನ್ಯಾಕುಮಾರಿಯಲ್ಲಿರುವ ಗಾಂಧಿ ಮಂಟಪದ ಆಕೃತಿ ನಿರ್ಮಿಸಲಾಗಿತ್ತು. ಇದಕ್ಕೆ ವಿವಿಧ ಬಣ್ಣದ 3 ಲಕ್ಷ ಗುಲಾಬಿಗಳನ್ನು ಬಳಸಲಾಗಿತ್ತು. ಜತೆಗೆ ದಂಡಿಯಾತ್ರೆಯನ್ನು ರೂಪಿಸಲಾಗಿತ್ತು. ಆ ಮೂಲಕ ಸತ್ಯ, ಅಹಿಂಸೆ, ಸಮಾನತೆ, ಸ್ವಾವಲಂಬನೆ ಸೇರಿದಂತೆ ಗಾಂಧೀಜಿಯ ತತ್ವ ಆದರ್ಶಗಳನ್ನು ಯುವ ಪೀಳಿಗೆಗೆ ಸಾರಲಾಯಿತು.

ದೇಶ-ವಿದೇಶಗಳಿಂದ ಬಂದ ಪ್ರವಾಸಿಗರಿಗೆ ಈ ಬಾರಿ ರಾಜ್ಯ ಸರ್ಕಾರದ ಯೋಜನೆಗಳನ್ನು ಪರಿಚಯಿಸಲು ವಿಧವಿಧ ಮಾದರಿಗಳನ್ನು ಹೂವಿಂದ ರೂಪಿಸಲಾಗಿತ್ತು. ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಮಾದರಿಗಳು ಈ ಬಾರಿ ಹೆಚ್ಚು ಗಮನ ಸೆಳೆದವು.

ಜತೆಗೆ ಭಾರತೀಯ ನಾರಿಯರ ಸಿಂಧೂರ ಅಳಿಸಿದ ಭಯೋತ್ಪಾದಕರಿಗೆ ತಕ್ಕ ಉತ್ತರ ಕೊಡಲು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂಧೂರ ಕೂಡ ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಂಡಿತ್ತು. ದೇಶಕ್ಕೆ ಕೀರ್ತಿ ತಂದು ಕೊಟ್ಟ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವೂಮಿಕಾ ಸಿಂಗ್ ಅವರಿಗೆ ಗೌರವ ಸಲ್ಲಿಸಲು ಆರ್ಮಿ ಟ್ರಕ್, ಏರ್ ಜೆಟ್ ಯುದ್ಧ ನೌಕೆ ಅನ್ನು ಗುಲಾಬಿ, ಸೇವಂತಿಗೆ, ಇತರ ವಿಶಿಷ್ಟ ಹೂಗಳಿಂದ ನಿರ್ಮಿಸಿದ್ದು, ಹೆಚ್ಚು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು.

ಅತ್ಯಾರ್ಷಕ ಹೂವುಗಳಿಂದ ರಾಜರ್ಷಿ ನಾಲ್ವಡಿ ಪ್ರತಿಮೆ, ಅಂಬಾರಿ ಹೊತ್ತ ಆನೆ, ನಂದಿಯ ಕಲಾಕೃತಿ ಸೇರಿ ವಿವಿಧ ಮಾದರಿಗಳು ನೋಡುಗರ ಗಮನ ಸೆಳೆದವು. ಈ ಬಾರಿ ವಿಶೇಷವಾಗಿ ಜಿನಿಯಾ, ಫೆಲೋಶಿಯಾ, ಕಾಕ್ಸೊಂಬು, ಫ್ರೆಂಚ್, ಮರಿಗೋಲ್ಡ್ ಸೇರಿ 20ರಿಂದ 25 ಬಗೆಯ ತರಹೇವಾರಿ ಹೂವುಗಳನ್ನು ಬಳಸಲಾಗಿತ್ತು. ಕುಪ್ಪಣ್ಣ ಪಾರ್ಕ್‌ನ ಎತ್ತ ನೋಡಿದರೂ ಬಣ್ಣ ಬಣ್ಣದ ಹೂಗಳು ಕಾಣಸಿಗುತ್ತಿತ್ತು. ಲಕ್ಷಾಂತರ ಹೂಗಳಿಂದ ನಿರ್ಮಾಣವಾಗಿದ್ದ ಎಲ್ಲ ಮಾದರಿಗಳು ಜನ ಮನಸೆಳೆದವು.

ದಸರಾ ಮಹೋತ್ಸವದ ಅಂಗವಾಗಿ ಸೆ.22 ರಿಂದ ಅ.2 ರವರೆಗೆ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿದ್ದ ಈ ಬಾರಿಯ ಫಲಪುಷ್ಪ ಪ್ರದರ್ಶನ ಯಶಸ್ವಿಯಾಗಿದ್ದು, 4 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು, ಸಾರ್ವಜನಿಕರು ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ. ಅಬೀಬಾ ನಿಶಾದ್ ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net