ಮುಂಡಗೋಡ: ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಐದು ಮನೆಗಳ ಬೀಗ ಮುರಿದು ಕಳವು ಮಾಡಲಾಗಿದೆ.
ತಾಲೂಕಿನ ಗಣೇಶಪುರದಲ್ಲಿ ಎರಡು, ಹಿರಳ್ಳಿ, ಶಿಂಗ್ನಳ್ಳಿ ಹಾಗೂ ಭದ್ರಾಪುರ ಗ್ರಾಮದ ಒಂದೊಂದು ಮನೆಯಲ್ಲಿ ಕಳವಾಗಿದೆ.
ಮನೆಗಳ ಮಾಲೀಕರು ಬೀಗ ಹಾಕಿ ಪರ ಊರಿಗೆ ಹೋಗಿರುವುದನ್ನು ಖಚಿತ ಪಡಿಸಿಕೊಂಡು ಕಳ್ಳರು ಕೈಚಳಕ ತೋರಿಸಿದ್ದಾರೆ ಎನ್ನಲಾಗುತ್ತಿದೆ.
ಮಂಗಳವಾರ ರಾತ್ರಿ ಮೂವರು ಕಳ್ಳರು ಒಂದು ಬೈಕ್‌ನಲ್ಲಿ ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಮನೆಗಳ ಬೀಗ ಮುರಿದು ನಗದು, ಒಡವೆ ದೊಚಿದ್ದಾರೆ. ಕಳ್ಳರು ಎದುರು ಮನೆ ಬೀಗ ಒಡೆಯುವುದನ್ನು ಕಂಡ ಯುವಕನೊಬ್ಬ ಭಯದಿಂದ ಸುಮ್ಮನಾಗಿದ್ದಾನೆ. ಸದ್ದು ಮಾಡಿದರೆ ಹಲ್ಲೆ ಮಾಡುತ್ತಾರೆ ಎಂಬ ಭಯದಿಂದ ಯುವಕ ರಾತ್ರಿ ಸುಮ್ಮನಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಕಾರವಾರದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಬುಧವಾರ ಸಂಜೆಯವರೆಗೂ ಸರಣಿ ಕಳವು ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.