ಶ್ರೀನಗರ: ಸೇನಾ ಸಿಬ್ಬಂದಿ ಥಳಿತ, ನಾಲ್ವರು ಪೊಲೀಸರಿಗೆ ಗಂಭೀರ ಗಾಯ

bsf
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿ ಥಳಿಸಿದ್ದರಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಸೇನಾ ಸಿಬ್ಬಂದಿ ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದೆ. ಕುಪ್ವರಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್​ ಅಧಿಕಾರಿಗಳಾದ ರಯೀಸ್ ಖಾನ್​, ಇಮ್ತಿಯಾಜ್ ಮಲಿಕ್​ ಸೇರಿದಂತೆ ಕಾನ್​ಸ್ಟೆಬಲ್​​ಗಳಾದ ಸಲೀಮ್​ ಮುಷ್ತಾಕ್​, ಜಹೂರ್ ಅಹಮದ್​ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಗಾಯಗೊಂಡಿರುವ ಪೊಲೀಸ್ ಅಧಿಕಾರಿಗಳನ್ನು ಸೌರಾದ ಎಸ್‌ಕೆಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಕುಪ್ವಾರದ ಬಟ್​ಪೋರಾದಲ್ಲಿರುವ ಸ್ಥಳೀಯ ಪ್ರಾದೇಶಿಕ ಸೇನಾಧಿಕಾರಿಯ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಸೇನಾ ಸಿಬ್ಬಂದಿಯು ಪೊಲೀಸ್​ ಠಾಣೆಗೆ ನುಗ್ಗಿ ಪೊಲೀಸರನ್ನು ಥಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದ ನಂತರ ಪ್ರತಿಕ್ರಿಯಿಸುವುದಾಗಿ ಶ್ರೀನಗರ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net